ಐಟಿ ಕಾಯ್ದೆ ಸೆಕ್ಷನ್ 66(ಎ) ಸಂವಿಧಾನ ಬಾಹಿರ :ಸುಪ್ರೀಂ ತೀರ್ಪು.
ಸಾಮಾಜಿಕ ತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಬಳಕೆದಾರರಿಗೆ ಇವತ್ತು ಸುಪ್ರೀಂ ಕೋರ್ಟ್ ಸಿಹಿ ಸುದ್ದಿ ನೀಡಿದೆ. ಆಕ್ಷೇಪಾರ್ಹ ಸುದ್ದಿ, ವಿಚಾರ ಹೇಳುವ ವ್ಯಕ್ತಿಗಳನ್ನು ನಿಯಂತ್ರಿಸಲು ಇದ್ದ ಕಾನೂನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ.
ನ್ಯಾಯಾಧೀಶರಾದ ಜೆ. ಚೆಲುಮೇಶ್ವರ್ ಮತ್ತು ರೋಹಿಂಗ್ಟನ್ ನಾರಿಮನ್ ಅವರ ಸುಪ್ರೀಂ ಕೋರ್ಟ್ ಪೀಠ ಈ ಆದೇಶ ನೀಡಿ ಈ ಮೂಲಕ ಸಾಮಾಜಿಕ ತಾಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇದ್ದ ಅಡ್ಡಿಯನ್ನು ನಿವಾರಿಸಿದೆ. ಹೀಗಾಗಿ ಈ ಕಾಯ್ದೆ ಹೇಗೆ ಬಳಕೆಯಾಗುತಿತ್ತು? ಸರ್ಕಾರ ಬಳಕೆದಾರರನ್ನು ಹೇಗೆ ನಿಯಂತ್ರಿಸುತಿತ್ತು ಎನ್ನುವ ಕಿರು ಮಾಹಿತಿ ಇಲ್ಲಿದೆ.
ಐಟಿ ಕಾಯ್ದೆಯ ಸೆಕ್ಷನ್ 66(ಎ) ಏನು ಹೇಳುತ್ತದೆ?
ಕಂಪ್ಯೂಟರ್ ಅಥವಾ ಇನ್ಯಾವುದೋ ಎಲೆಕ್ಟ್ರಾನಿಕ್ಸ್ ಸಾಧನದ ಮೂಲಕ ಆಕ್ಷೇಪಾರ್ಹ ಚಿತ್ರ, ವಿವಾದಾತ್ಮಕ ಬರಹಗಳನ್ನು ಪ್ರಕಟಿಸುವುದು ಶಿಕ್ಷಾರ್ಹ ಅಪರಾಧ ಎಂದು ಐಟಿ ಕಾಯ್ದೆಯ ಸೆಕ್ಷನ್ 66(ಎ) ಹೇಳುತ್ತದೆ. ಈ ಪ್ರಕರಣದಲ್ಲಿ ಗರಿಷ್ಠ 3 ವರ್ಷ ಜೈಲು ಶಿಕ್ಷೆ ಮತ್ತು ದಂಡ ಹಾಕಲಾಗುತ್ತದೆ.
ಈ ಕಾಯ್ದೆಯಿಂದಾಗಿ ಸಮಸ್ಯೆ ಸೃಷ್ಟಿಯಾಗಿದ್ದು ಯಾಕೆ?
ಅಪರಾಧ ಎನ್ನುವ ಪದಕ್ಕೆ ವಿಶಾಲ ಅರ್ಥವಿದೆ. ಸಂವಿಧಾನ ಪರಿಚ್ಛೇದ 19(1)ರ ಪ್ರಕಾರ ಪ್ರತಿಯೊಬ್ಬ ಭಾರತೀಯ ಪ್ರಜೆಗೆ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾಂತಂತ್ರ್ಯದ ಹಕ್ಕು ನೀಡಲಾಗಿದೆ. ಹೀಗಾಗಿ ಒಬ್ಬ ವ್ಯಕ್ತಿ ಅವನ ಅಭಿಪ್ರಾಯವನ್ನು ಯಾವ ಮಾಧ್ಯಮದ ಮೂಲಕವೂ ವ್ಯಕ್ತಪಡಿಸಬಹುದು. ಆದರೆ ಇಲ್ಲಿ ವ್ಯಕ್ತಿಯೊಬ್ಬ ನಿಂದನೆಯ ಅಭಿಪ್ರಾಯವನ್ನು ಎಲೆಕ್ಟ್ರಾನಿಕ್ಸ್ ಸಾಧನದ ಮೂಲಕ ವ್ಯಕ್ತಪಡಿಸಿದ್ದಾನೆ ಎನ್ನುವ ಮಾತ್ರಕ್ಕೆ ಅದು ಶಿಕ್ಷಾರ್ಹ ಅಪರಾಧವಾಗಬೇಕು ಎಂದೆನಿಲ್ಲ. ಆದರೆ ಈ ಕಾಯ್ದೆಯ ಪ್ರಕಾರ ಅದು ಶಿಕ್ಷಾರ್ಹ ಅಪರಾಧ ಎಂದು ಪರಿಗಣನೆಯಾಗಿ ನಿಂದನೆಗೊಳಗಾದ ವ್ಯಕ್ತಿ ದೂರು ನೀಡಿದ್ದದ್ದಲ್ಲಿ ಪೊಲೀಸರು ನಿಂದಿಸಿದ ವ್ಯಕ್ತಿಗಳನ್ನು ಬಂಧಿಸಬಹುದಾಗಿತ್ತು.
ಈ ವಿವಾದ ಹುಟ್ಟಿಕೊಂಡದ್ದು ಯಾವಾಗ?
ಮಹಾರಾಷ್ಟ್ರ ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆ ನಿಧನವಾದಾಗ ಮುಂಬೈ ನಗರ ಬಂದ್ ಆಗಿತ್ತು. ಇದನ್ನು ಖಂಡಿಸಿ ಇಬ್ಬರು ಯುವತಿಯರು ಫೇಸ್‍ಬುಕ್‍ನಲ್ಲಿ ಕಾಮೆಂಟ್‍ಗಳನ್ನು ಪೋಸ್ಟ್ ಮಾಡಿದ್ದರು. ಇವರ ಪೋಸ್ಟ್ ಐಟಿ ಕಾಯ್ದೆಯ ಸೆಕ್ಷನ್ 66ಎ ಅಡಿಯಲ್ಲಿ ಆಕ್ಷೇಪಾರ್ಹವಾಗಿದ್ದರಿಂದ ಥಾಣೆ ಪೊಲೀಸರು 2012ರ ನವೆಂಬರ್‍ನಲ್ಲಿ ಇವರನ್ನು ಬಂಧಿಸಿದ್ದರು. ಇವರನ್ನು ಬಂಧಿಸಿದ್ದನ್ನು ಪ್ರಶ್ನಿಸಿ ಜೊತೆಗೆ ಸೆಕ್ಷನ್ 66 ಎ ರದ್ದು ಮಾಡುವಂತೆ ದೆಹಲಿ ಮೂಲದ ಕಾನೂನು ವಿದ್ಯಾರ್ಥಿನಿ ಶ್ರೇಯಾ ಸಿಂಗಾಲ್ ಸುಪ್ರೀಂ ಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇವರಿಗೆ ಹಲವರು ಬೆಂಬಲ ನೀಡಿದರು.
66ಎ ಕಾಯ್ದೆ ಹೇಗೆ ನಿರಂತರ ಬಳಕೆಯಾಗುತಿತ್ತು?
2012ರ ಪ್ರಕರಣದ ಬೆಳಕಿಗೆ ಬಂದ ಬಳಿಕ ದೇಶದಲ್ಲಿ ಮತ್ತಷ್ಟು ಪ್ರಕರಣಗಳು ದಾಖಲಾದವು. ಪಶ್ಚಿಮ ಬಂಗಾಳದಲ್ಲಿ ಜಾದವ್‍ಪುರ ವಿಶ್ವವಿದ್ಯಾಲಯದ ಉಪನ್ಯಾಸಕ ಅಭಿಷೇಕ್ ಮಹಾಪಾತ್ರ ಟಿಎಂಸಿಯ ಅಧಿನಾಯಕಿ ಮಮತಾ ಬ್ಯಾನರ್ಜಿ ವ್ಯಕ್ತಿತ್ವವನ್ನು ವಿಡಂಬಿಸಿ ಕಾರ್ಟೂನ್ ರಚಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು. ಸಾಮಾಜಿಕ ಕಾರ್ಯಕರ್ತ ಅಸೀಮ್ ತ್ರಿವೇದಿ ಸಂಸತ್ತನ್ನು ಟಾಯ್ಲೆಟ್‍ಗೆ ಹೋಲಿಸಿ ಚಿತ್ರ ರಚಿಸಿದ್ದರು.
ಈ ಕಾಯ್ದೆಯಿಂದ ಗೊಂದಲ ಉಂಟಾಗಿದ್ದು ಯಾಕೆ?
ಮುಂಬೈ ದಾಳಿಯ ಬಳಿಕ 2008ರ ಡಿಸೆಂಬರ್ 22 ರಂದು ಲೋಕಸಭೆಯಲ್ಲಿ ಆತುರತುರವಾಗಿ ಮಸೂದೆ ಮಂಡಿಸಿ ಅಂಗೀಕರಿಸಲಾಗಿತ್ತು. ಸಂವಿಂಧಾನ ವಾಕ್ ಮತ್ತು ಅಭಿವ್ಯಕ್ತಿ ಸ್ವಾಂತಂತ್ರ್ಯವನ್ನು ನೀಡಿದೆ. ಆದರೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಪರಿಚ್ಛೇದ 19(1)ರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಿಲ್ಲ ಕೆಲ ನಿರ್ಬಂಧ ವಿಧಿಸಲಾಗಿದೆ ಎಂದು ಈ ಹಿಂದೆ ತಿಳಿಸಿತ್ತು. ಸಂವಿಧಾನವೇ ಸ್ವಾತಂತ್ರ್ಯ ನೀಡಿದರೂ ಕೇಂದ್ರ ಸರ್ಕಾರ ಈ ಕಾಯ್ದೆಯ ಮೂಲಕ ಜನರ ವಾಕ್ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದೆ. ನಮ್ಮ ಸ್ವಾತಂತ್ರ್ಯವನ್ನು ಸರ್ಕಾರ ಹತ್ತಿಕ್ಕುತ್ತಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‍ಗೆ ಸಾಕಷ್ಟು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳು ಸಲ್ಲಿಕೆಯಾಗಿತ್ತು.
ಕೋರ್ಟ್ ಏನು ಹೇಳಿದೆ?
ಸೆಕ್ಷನ್ 66(ಎ) ಗೆ ಸಾಂವಿಧಾನಿಕ ಮಾನ್ಯತೆ ಇಲ್ಲ. ಈ ಕಾಯ್ದೆ ನಾಗರೀಕರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ಅಲ್ಲದೇ ಮೂಲಭೂತ ಹಕ್ಕಿನ ಉಲ್ಲಂಘನೆಯೂ ಆಗುತ್ತಿದೆ. ಹೀಗಾಗಿ, ಕಾಯ್ದೆಯನ್ನು ರದ್ದು ಮಾಡುತ್ತಿದ್ದೇವೆ ಎಂದು ಜೆ. ಚೆಲಮೇಶ್ವರ್ ಹಾಗೂ ರೋಹಿಂಗ್ಟನ್ ನಾರಿಮನ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ ಅಭಿಪ್ರಾಯಪಟ್ಟು ಸೆಕ್ಷನ್ 66(ಎ) ವಿಧಿಯನ್ನು ರದ್ದುಗೊಳಿಸಿದೆ. ಅಷ್ಟೇ ಅಲ್ಲದೇ ಒಂದು ವಾರದ ಒಳಗೆ ಕೇಂದ್ರ ಸರ್ಕಾರ ಈ ಸೆಕ್ಷನ್ ತಿದ್ದುಪಡಿ ಮಾಡುವ ಬಗ್ಗೆ ಅಫಿದವಿತ್ ಸಲ್ಲಿಸಬೇಕು ಅಥವಾ ಈ ಸೆಕ್ಷನ್ ಅನ್ನು ರದ್ದುಗೊಳಿಸಬೇಕು ಎಂದು ಪೀಠ ಸೂಚಿಸಿದೆ.
No comments:
Post a Comment
Thanking You For Your Valuable Comment. Keep Smile