Friday 30 May 2014

ಕ್ರಯೋಜೆನಿಕ್ ತಂತ್ರಜ್ಞಾನ ಎಂದರೇನು? ರಾಕೆಟ್ ಉಡಾವಣೆಯಲ್ಲಿ ಕ್ರಯೋಜೆನಿಕ್ ಇಂಧನದ ಬಳಕೆ ಹೇಗೆ ? ಅದರ ಇತರ ಉಪಯೋಗಗಳ ಕುರಿತು ವಿಶ್ಲೇಷಿಸಿರಿ.

ಕ್ರಯೋಜೆನಿಕ್ ತಂತ್ರಜ್ಞಾನ ಎಂದರೇನು? ರಾಕೆಟ್ ಉಡಾವಣೆಯಲ್ಲಿ ಕ್ರಯೋಜೆನಿಕ್ ಇಂಧನದ ಬಳಕೆ ಹೇಗೆ ?
 ಅದರ ಇತರ ಉಪಯೋಗಗಳ ಕುರಿತು ವಿಶ್ಲೇಷಿಸಿರಿ.
( What do you mean by Cryogenic Technology ? How the Cryogenic Fuel works in Rocket Launcher ? Analyse the significance of Cryogenic Technology)

 ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ತಂತ್ರಜ್ಞಾನದ ಮೂಲಕ ಅಭಿವೃದ್ದಿ ಪಡಿಸಿದ ಜಿಎಸ್ಎಲ್‌ವಿ’ ಡಿ5 ಉಪಗ್ರಹ ವಾಹಕ ಯಶಸ್ವಿ ಉಡಾವಣೆಯು ಭಾರತಕ್ಕೆ ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರತಿಷ್ಠಿತ ಸ್ಥಾನ ತಂದುಕೊಟ್ಟಿವೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ಕ್ರಯೋಜೆನಿಕ್ ರಾಕೆಟ್ ಎಂಜಿನ್ ಕುರಿತ ಕೆಲವು ಮಾಹಿತಿಗಳು ಇಲ್ಲಿವೆ.

 * ಕ್ರಯೋಜೆನಿಕ್ ಇಂಧನ (Cryogenic Fuel) ಎಂದರೇನು?
 — ಕ್ರಯೋಜೆನಿಕ್ ಇಂಧನವು ಅತ್ಯಧಿಕ ಪ್ರಮಾಣದಲ್ಲಿ ತಂಪಾಗಿಸಿದ ಜಲಜನಕ ಮತ್ತು ಆಮ್ಲಜನಕದ ಸಂಯೋಜನೆಯಾಗಿದೆ. (ಅಂದರೆ –253 ಡಿಗ್ರಿ ಸೆಲ್ಸಿಯಸ್‌ನಷ್ಟು ಜಲಜನಕ ಮತ್ತು –183 ಡಿಗ್ರಿ ಸೆಲ್ಸಿಯಸ್‌ನಷ್ಟು ಆಮ್ಲಜನಕ).

 * ಕ್ರಯೋಜೆನ್ (Cryogen) ಹಾಗೆಂದರೇನು?
— ‘ಕ್ರಯೋಜೆನ್’ ಎಂದರೆ ಶೀತಲೀಕರಣದ ಉತ್ಪತ್ತಿ ಎಂದರ್ಥ. ಅಂದರೆ –150 (ಮೈನಸ್‌) ಡಿಗ್ರಿ ಸೆಲ್ಸಿಯಸ್‌, –238 ಡಿ.ಎಫ್ (ಡಿಗ್ರಿ ಫ್ಯಾರನ್‌ಹೀಟ್‌) ಅಥವಾ 123 ಕೆ. (ಕೆಲ್ವಿನ್) ಗಿಂತ ಕಡಿಮೆ ತಾಪಮಾನ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ.ಇಂದು ಕ್ರಯೋಜೆನಿಕ್ ಪದವು ಅತ್ಯಂತ ‘ಕಡಿಮೆ ತಾಪಮಾನ’ ಎಂಬ ಅರ್ಥದಲ್ಲಿ ಬಳಕೆಯಲ್ಲಿದೆ.

- ಭೌತವಿಜ್ಞಾನದ ಪ್ರಕಾರ ಕಡಿಮೆ ತಾಪಮಾನದಲ್ಲಿ ವಸ್ತುಗಳ ಭೌತಿಕ ರೂಪ ಬದಲಾವಣೆ ಮತ್ತು ಉತ್ಪಾದನೆಯ ಬಗ್ಗೆ ಅಧ್ಯಯನ ನಡೆಸುವುದಕ್ಕೆ ಕ್ರಯೋಜೆನಿಕ್ ಎನ್ನುತ್ತಾರೆ. ಇದನ್ನು ಅಧ್ಯಯನ ನಡೆಸುವವರಿಗೆ ಕ್ರಯೋಜೆನಿಸ್ಟ್ ಎಂದು ಕರೆಯಲಾಗುತ್ತದೆ.

 ಇನ್ನೂ ಸರಳವಾಗಿ ಹೇಳುವುದಾದರೆ, ಆಹಾರ ಪದಾರ್ಥಗಳು, ಕೆಲವು ಔಷಧಿಗಳು ಮತ್ತು ಲಸಿಕೆಗಳನ್ನು ಕೆಡದಂತೆ ಇರಿಸಲು ಬಳಸುವ ಶೀತಲೀಕರಣ (ಫ್ರಿಡ್ಜ್) ವ್ಯವಸ್ಥೆಯ ಬಹಳಷ್ಟು ಸುಧಾರಿತ ತಂತ್ರಜ್ಞಾನದಂತೆ ಕ್ರಯೋಜೆನ್ ಸಹ ಕೆಲಸ ಮಾಡುತ್ತದೆ.

 ಹೀಗಿದ್ದೂ, ಎರಡರ ನಡುವೆಯೂ ಸಾಕಷ್ಟು ವ್ಯತ್ಯಾಸಗಳಿವೆ. ಫ್ರಿಡ್ಜ್‌ ಒಳಗೆ ತಂಪು ವಾತಾವರಣ ನಿರ್ಮಿಸಲು ಹೊರಗಿನಿಂದ ಶಾಖವನ್ನು(ವಿದ್ಯುತ್, ರಸಾಯನಿಕ ವ್ಯವಸ್ಥೆ ಮೂಲಕ) ನೀಡಲಾಗುತ್ತದೆ. ಆದರೆ ಕ್ರಯೋಜೆನಿಕ್‌ ತಂತ್ರಜ್ಞಾನ ಫ್ರಿಡ್ಜ್‌ಗಿಂತ ಬಹಳ ಭಿನ್ನವಾದ ರೀತಿಯಲ್ಲಿ ಹೆಚ್ಚಿನ ಕೆಲಸ ನಿರ್ವಹಿಸುತ್ತದೆ. ಶೀತಲೀಕರಿಸಿದ ಆಹಾರವನ್ನು ಹೆಚ್ಚು ದಿನಗಳವರೆಗೆ ಸಂರಕ್ಷಿಸಲು ಸಾಧ್ಯವಾಗಿರುವುದೇ ಇದಕ್ಕೆ ಉತ್ತಮ ಉದಾಹರಣೆ.

 — ಕ್ರಯೋಜೆನಿಕ್ ತಂಪಾಗಿಸಿದ ದ್ರವ ಇಂಧನ, ಅಂದರೆ ಜಲಜನಕ ಮತ್ತು ಆಮ್ಲಜನಕವನ್ನು ಒಳಗೊಂಡಿದೆ. ಹೀಗಾಗಿ ಅತ್ಯಂತ ಕಡಿಮೆ ತಾಪಮಾನದಿಂದ ಕೂಡಿದೆ.ಕ್ರಯೋಜೆನಿಕ್ ವೈಶಿಷ್ಟ್ಯಶಾಖ ಪ್ರಕ್ರಿಯೆಯಲ್ಲಿ ಒಂದು ಲೋಹಕ್ಕೆ ಶಾಖ ನೀಡಿ ಅದನ್ನು ತಣಿಸಿದ ಮೇಲೂ ಶಾಖದ ಪ್ರಮಾಣ ಸ್ಪಲ್ಪ ಉಳಿದಿರುತ್ತದೆ. ಆದರೆ ಕ್ರಯೋಜೆನಿಕ್ ಪ್ರಕ್ರಿಯೆಯಲ್ಲಿ ಲೋಹವನ್ನು ತಣ್ಣಗಾಗಿಸಿದ ನಂತರ ಉಳಿಯುವ ಉಷ್ಣತೆಯನ್ನೂ ತಗ್ಗಿಸುವ ಸಾಮರ್ಥ್ಯವಿದೆ.

 * ಕ್ರಯೋಜೆನಿಕ್ ತಾಪಮಾನ ಮಾಪಕ :—  ಸಾಮಾನ್ಯವಾಗಿ ತಾಪಮಾನವನ್ನು ಅಳೆಯಲು ಸಾಪೇಕ್ಷ ತಾಪಮಾನ ಮಾಪಕಗಳಾದ ಸೆಲ್ಸಿಯಸ್ ಮತ್ತು ಫ್ಯಾರನ್‌ಹೀಟ್ ಬಳಸಲಾಗುತ್ತದೆ.ಆದರೆ ಕ್ರಯೋಜೆನಿಕ್ ತಾಪಮಾನದ ಅಧ್ಯಯನ ನಡೆಸಲು ವಿಜ್ಞಾನಿಗಳು ನಿರಪೇಕ್ಷ ತಾಪಮಾನ ಮಾಪಕಗಳಾದ ಕೆಲ್ವಿನ್ ಮತ್ತು ರಾಂಕಿನ ಮಾಪಕಗಳನ್ನು ಬಳಸಿದ್ದಾರೆ.

— ಈ ಕ್ರಯೋಜೆನಿಕ್ ಇಂಧನವನ್ನು ದ್ರವರೂಪದಲ್ಲಿ ಅತ್ಯಂತ ತಂಪಾದ ವಾತಾವರಣದಲ್ಲಿ ಇಡಲು ಜೇಮ್ಸ್ ಡೆವರ್‌ ಎಂಬ ವಿಜ್ಞಾನಿ ಅಭಿವೃದ್ಧಿಪಡಿಸಿರುವ ‘ಡೆವರ್‌ ಫ್ಲಾಸ್ಕ್’ ನಲ್ಲಿ (Dewar flasks) ನಲ್ಲಿ ಸಂಗ್ರಹಿಸಿ ಇಡಲಾಗುತ್ತದೆ.

 * ಕ್ರಯೋಜೆನಿಕ್ ತಂತ್ರಜ್ಞಾನದ ಇತಿಹಾಸ : —  ‘ಕ್ರಯೋಜೆನಿಕ್’ ಪದವನ್ನು ಗ್ರೀಕ್ ಪದವಾದ ‘kyros’ ಅಂದರೆ ‘ಶೀತ’ ಅಥವಾ ‘ಘನೀಕರಿಸು’ ಎಂದು, ಮತ್ತು ‘genes’ ಅಂದರೆ ‘ಹುಟ್ಟು’ ಅಥವಾ ‘ಉತ್ಪತ್ತಿ’ ಎಂಬ ಅರ್ಥದಿಂದ ಕೂಡಿದೆ. ವಿಶ್ವದ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಕ್ರಯೋಜೆನಿಕ್ ತಂತ್ರಜ್ಞಾನ ಕ್ಷೇತ್ರ ಪ್ರಗತಿ ಕಂಡಿತು. ಸ್ವತಂತ್ರವಾಗಿ ಶಕ್ತಿಶಾಲಿ ರಾಕೆಟ್ ಎಂಜಿನ್ ನಿರ್ಮಾಣ ಮಾಡಬಲ್ಲ ಜರ್ಮನ್, ಅಮೆರಿಕ ಮತ್ತು ಸೋವಿಯತ್ ರಷ್ಯಾದ ಎಂಜಿನಿಯರ್‌ಗಳು ರಾಕೆಟ್ ಎಂಜಿನ್ನಿಗೆ ಹೆಚ್ಚಿನ ವೇಗ ನೀಡಲು ಉತ್ಕರ್ಷಣಕಾರಿ (oxidizer) ಪ್ರಕ್ರಿಯೆ ಮತ್ತು ಇಂಧನದ ಅವಶ್ಯಕತೆ ಇದೆ ಎಂಬುದನ್ನು ಕಂಡುಕೊಂಡರು.ಆಗ ಅವರು ಬಳಸಿದ ಜಲಜನಕ ಮತ್ತು ಹೈಡ್ರೋಕಾರ್ಬನ್‌ನ ಮಿಶ್ರ ಇಂಧನವು ರಾಕೆಟ್‌ನ ದಕ್ಷತೆಯನ್ನೇ ತೀವ್ರವಾಗಿ ಕಡಿಮೆ ಮಾಡಿತು. ಇದರಿಂದ ರಾಕೆಟನ್ನು ಮೇಲಕ್ಕೆ ಹೊತ್ತೊಯ್ಯಲು ಕ್ರಯೋಜೆನಿಕ್ ತಾಪಮಾನದಿಂದ (ಅಂದರೆ –150 ಡಿ. ಸೆ, –238 ಡಿ. ಎಫ್‌ಗಿಂತಲೂ ಕಡಿಮೆ) ಮಾತ್ರವೇ ಸಾಧ್ಯ ಎಂಬುದನ್ನು ಕಂಡುಕೊಂಡರು.

 * ರಾಕೆಟ್ ಉಡಾವಣೆ - ಒಂದಿಷ್ಟು ಮಾಹಿತಿ: —  ರಾಕೆಟ್ ಗಳಲ್ಲಿ ಘನ, ದ್ರವ, ಘನ-ದ್ರವದ ಮಿಶ್ರಣ, ಮತ್ತು ಪರಮಾಣು ಇಂಧನ ಹೊಂದಿರುವ ಎಂಜಿನ್ ಗಳಿವೆ.ಘನ ರಾಕೆಟ್ ಎಂಜಿನ್ ಕಡಿಮೆ ವೆಚ್ಚದ ಇಂಧನ ಮತ್ತು ಉತ್ಕರ್ಷಣಕಾರಿಯ ಸಮ್ಮಿಶ್ರಣವಾಗಿದೆ. ಘನ ಇಂಧನ ಎಂದ ಕೂಡಲೆ ಕಟ್ಟಿಗೆ, ಇದ್ದಿಲು ನೆನಪಾಗುತ್ತದೆ. ಆದರೆ ರಾಕೆಟ್ ಎಂಜಿನ್ ಗೆ ಅಲ್ಯೂಮಿನಿಯಂ ಪುಡಿಯನ್ನು ಇಂಧನವಾಗಿ ಅಮೋನಿಯಂ ಪರ್ಕ್ಲೋರೇಟ್ ಅನ್ನು ಉತ್ಕರ್ಷಣಕಾರಿಯಾಗಿ ಬಳಸಲಾಗುತ್ತದೆ. ಈ ಎಂಜಿನ್ ಗೆ ಒಮ್ಮೆ ಬೆಂಕಿ ತಾಕಿಸಿದರೆ ಇಂಧನ ಮುಗಿಯುವವರೆಗೂ ನಿಲ್ಲದೇ ಉರಿಯುತ್ತದೆ. ಹೀಗಾಗಿ ಅತ್ಯಾಧುನಿಕ ರಾಕೆಟ್ ಗಳು ಘನ ಮತ್ತು ದ್ರವ ಇಂಧನದ ಸಂಯೋಜನೆಯಿಂದ ಕೂಡಿರುತ್ತದೆ.ಆರಂಭದ ಉಡಾವಣೆ ಹಂತಕ್ಕೆ ಘನ ಇಂಧನ ಬಳಸಲಾಗುತ್ತದೆ. ಯಾವಾಗ ರಾಕೆಟ್ ನಿಗದಿತ ವೇಗ ಪಡೆದುಕೊಳ್ಳುತ್ತದೆಯೋ ಆ ಹಂತದಲ್ಲಿ ದ್ರವ ಇಂಧನವು ರಾಕೇಟಿನ ಭಾರಕ್ಕೆ ಅನುಗುಣವಾಗಿ ವೇಗೋತ್ಕರ್ಷವನ್ನು ಮತ್ತಷ್ಟು ಹೆಚ್ಚಿಸಿ, ಸರಿಯಾದ ಪಥವನ್ನು ತಲುಪಲು ಸಹಾಯ ಮಾಡುತ್ತದೆ.

ಹೀಗಿದ್ದೂ, ಈ ಮೊದಲು ಉಪಗ್ರಹ ಉಡಾವಣೆಗೆ ಬಳಸುತ್ತಿದ್ದ ‘ಪಿಎಸ್ಎಲ್‌ವಿ’(PSLV) ಗೆ (ಪೊಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಹೆಚ್ಚು ಭಾರವಾದ ಉಪಗ್ರಹ ಹೊರುವ ಸಾಮರ್ಥ್ಯ ಇರಲಿಲ್ಲ. ಈ ಕೊರತೆ ನೀಗಿಸಲು ‘ಜಿಎಸ್ಎಲ್‌ವಿ’(GSLV) (ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ವ್ಯವಸ್ಥೆ ಬಳಸಲಾಯಿತು. ಮುಖ್ಯವಾಗಿ ಅತ್ಯಧಿಕ ಪ್ರಮಾಣದಲ್ಲಿ ತಂಪಾಗಿಸಿದ ದ್ರವ ಕ್ರಯೋಜೆನಿಕ್ ಇಂಧನ ಬಳಸಲಾಗಿದೆ.

 * ರಾಕೆಟ್ ಉಡಾವಣೆಯಲ್ಲಿ ಕ್ರಯೋಜೆನಿಕ್ ಇಂಧನದ ಬಳಕೆ ಹೇಗೆ ?
— ಕ್ರಯೋಜೆನಿಕ್ ರಾಕೆಟ್ ಎಂಜಿನ್ನಿನಲ್ಲಿ ಕ್ರಯೋಜೆನಿಕ್ ಇಂಧನ ಅಥವಾ ಉತ್ಕರ್ಷಣಕಾರಿ (oxidizer) ಇಲ್ಲವೇ ಎರಡೂ ಬಗೆಯ ಇಂಧನಗಳನ್ನೂ ದ್ರವೀಕೃತಗೊಳಿಸಿ ಅತ್ಯಂತ ಕಡಿಮೆ ತಾಪಮಾನದಲ್ಲಿ ಶೇಖರಿಸಲಾಗುತ್ತದೆ. ಈ ಇಂಧನವನ್ನು ಎಂಜಿನ್ ನ ಉರಿ ಕೊಳವೆಗೆ ಕಳುಹಿಸಿದಾಗ 2ರಿಂದ 2.5 ಟನ್ ಭಾರೀ ತೂಕದ ಉಪಕರಣವನ್ನು ಬಾಹ್ಯಾಕಾಶಕ್ಕೆ ತಳ್ಳಲು ಅಗತ್ಯವಾದ ಹೆಚ್ಚಿನ ಪ್ರಮಾಣದ (ಸೆಕೆಂಡಿಗೆ 4.4 ಕಿ.ಮೀ ವೇಗ) ಶಕ್ತಿ ಉತ್ಪಾದನೆ ಆಗುತ್ತದೆ.

 * ಕ್ರಯೋಜೆನಿಕ್ ರಾಕೆಟ್ ಎಂಜಿನ್:— ಕ್ರಯೋಜೆನಿಕ್ ರಾಕೆಟ್ ಎಂಜಿನ್ ತಯಾರಿಕೆಯಲ್ಲಿ ದ್ರವರೂಪದ ಜಲಜನಕ ಇಂಧನ ಮತ್ತು ಆಮ್ಲಜನಕದ ಸಂಯೋಗ ಹೆಚ್ಚು ಬಳಕೆಯಲ್ಲಿದೆ.ಈ ಎರಡೂ ಪದಾರ್ಥಗಳು ಸುಲಭವಾಗಿ ಮತ್ತು ಅಗ್ಗವಾಗಿ ದೊರೆಯತ್ತವೆ. ಈ ಕ್ರಯೋಜೆನಿಕ್ ಇಂಧನ ವ್ಯವಸ್ಥೆಯನ್ನು ರಾಕೆಟ್ ಎಂಜಿನ್ನಿನಲ್ಲಿ ಬಳಸಲು 1940ರಲ್ಲಿ ಆಸ್ಟ್ರೇಲಿಯಾದ ಬಾಹ್ಯಾಕಾಶ ಎಂಜಿನಿಯರ್ ಯೂಜೆನ್ ಸ್ಯಾಂಗರ್ ಅವರು ಮೊದಲುಸಲಹೆ ನೀಡಿದರು.1996ರಲ್ಲಿ ‘cryogenic hardening’ ಸಿದ್ಧಾಂತದ (–185 ಡಿಗ್ರಿ ಸೆಲ್ಸಿಯಸ್‌ಗೆ ಲೋಹವನ್ನು ತಂಪಾಗಿಸುವುದು) ಆಧಾರದ ಮೇಲೆ ಎಡ್ವರ್ಡ್ ಬಾಷ್ ಅವರು ಕ್ರಯೋಜೆನಿಕ್ ಪ್ರಕ್ರಿಯೆ (cryogenic processing) ಕೈಗಾರಿಕೆ ಆರಂಭಿಸಿದರು.ಇಲ್ಲಿ ಲೋಹಗಳ ಬಾಳಿಕೆ ಹೆಚ್ಚಿಸಲು ಶಾಖದಿಂದ ಮೃಧುವಾಗಿಸುವ (heat treating) ವಿಧಾನಕ್ಕೆ ಬದಲಾಗಿ ಕ್ರಯೋಜೆನಿಕ್ ಪ್ರಕ್ರಿಯೆಯಡಿ ಹದಗೊಳಿಸುವಿಕೆ ವಿಧಾನ ಅಳವಡಿಸಿದರು.

 * ಕ್ರಯೋಜೆನಿಕ್ ಬಳಕೆ ಅಥವಾ ಉಪಯೋಗಗಳು :
—  ದ್ರವೀಕೃತ ಅನಿಲಗಳಾದ ದ್ರವ ಸಾರಜನಕ ಮತ್ತು ದ್ರವ ಹೀಲಿಯಂ ಅನ್ನು ಹಲವು ಕ್ರಯೋಜೆನಿಕ್ ತಂತ್ರಜ್ಞಾನದಲ್ಲಿ ಬಳಸಬಹುದು. ಅವುಗಳಲ್ಲಿ ಕೆಲವು ಇಲ್ಲಿವೆ.

 - ವಿದ್ಯುಚ್ಛಕ್ತಿ ಸರಬರಾಜಿಗೆ ಮಹಾನಗರಗಳಲ್ಲಿ ನೆಲದಡಿ ಕೇಬಲ್‌ಗಳು ಬಿಸಿಯಾಗಿ ವಿದ್ಯುತ್ ವ್ಯಯವಾಗುತ್ತದೆ. ಹೀಗಾಗಿ ನೆಲದಡಿಯಲ್ಲಿ ಮಿಶ್ರ ಲೋಹ ಹೊಂದಿರುವ ಕೇಬಲ್‌ಗಳನ್ನು ಹೆಚ್ಚು ತಂಪಾಗಿರಿಸಿ, ವಿದ್ಯುತ್ ಪ್ರವಹಿಸುವ ಸಾಮರ್ಥ್ಯ ಹೆಚ್ಚಿಸಲು ಸಾರಜನಕ ಅಥವಾ ಹೀಲಿಯಂನಂತಹ ಕ್ರಯೋಜೆನಿಕ್ ದ್ರವ್ಯಗಳನ್ನು ಬಳಸಲಾಗುತ್ತದೆ.

 - ಆಹಾರ ರಕ್ಷಣೆಗೆಮೀನು, ಮಾಂಸದಂತಹ ಶೀತಲೀಕರಿಸಿದ ಆಹಾರ ಪದಾರ್ಥಗಳನ್ನು ಸಾಗಿಸಲೂ ಸಹ ಕ್ರಯೋಜೆನಿಕ್ ಅನಿಲವನ್ನು ಬಳಸಲಾಗುತ್ತದೆ.

 - ಯುದ್ಧಭೂಮಿ, ಭೂಕಂಪ ಪೀಡಿತ ಪ್ರದೇಶಕ್ಕೆ ಶೀತಲೀಕರಿಸಿದ ಆಹಾರ ಪದಾರ್ಥಗಳನ್ನು ಸಾಗಿಸುವಾಗ ಕೆಡದಂತೆ ಇಡಲು ಕ್ರಯೋಜೆನಿಕ್ ಫುಡ್ ಫ್ರೀಜಿಂಗ್ ವಿಧಾನ ಅನುಸರಿಸಲಾಗುತ್ತದೆ. ಹಾಗಾಗಿಯೇ ಇದು ಆಹಾರ ಸಂಸ್ಕರಣಾ ಕೈಗಾರಿಕೆಗಳಿಗೂ ಹೆಚ್ಚು ಉಪಯುಕ್ತವಾಗಿದೆ.

 - ಕೆಲವು ಅಪರೂಪದ ರಕ್ತದ ಗುಂಪುಗಳನ್ನು ಅತೀ ಕಡಿಮೆ –165 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಸಂಗ್ರಹಿಸಿಡಲಾಗುತ್ತದೆ. ಇಂತಹ ಚಟುವಟಿಕೆಗೂ ಕ್ರಯೋಜೆನಿಕ್‌ ತಂತ್ರಜ್ಞಾನದ ಪ್ರಯೋಜನೆ ಪಡೆದುಕೊಳ್ಳಲಾಗುತ್ತದೆ.

- ಅಲ್ಲದೆ, ಇನ್‌ಫ್ರಾರೆಡ್‌ ಕ್ಯಾಮೆರಾದ ಡಿಟೆಕ್ಟರ್ ಅನ್ನು ಶಿಲೀಂಧ್ರದಿಂದ ರಕ್ಷಿಸಲು ಕ್ರಯೋಜೆನಿಕ್ ಬಳಸಲಾಗುತ್ತದೆ.
ಇದರ ಎಲ್ಲ ಕಾರ್ಯಸಾಧ್ಯತೆಗಳ ಕುರಿತು ಹಲವು ಅಧ್ಯಯನಗಳು ನಡೆದಿದ್ದು, ಅಂತರರಾಷ್ಟ್ರೀಯ ಶಕ್ತಿ ಸಂಸ್ಥೆಯ ಒಪ್ಪಂದ ದೊರೆಯಬೇಕಿದೆ.

 *- ಎಂಆರ್‌ಐ ಸ್ಕ್ಯಾನಿಂಗ್ (MRI Scanning) ಹಾಗೆಂದರೇನು?
 - ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (MRI) ಸ್ಕ್ಯಾನಿಂಗ್ ತಂತ್ರಜ್ಞಾನದಲ್ಲಿ (ರೋಗಿಯ ದೇಹದ ಸಮಗ್ರ ವೈದ್ಯಕೀಯ ತಪಾಸಣೆಗೆ ಬಳಸುವ ತಂತ್ರಜ್ಞಾನ) ಕ್ರಯೋಜೆನಿಕ್ ಬಳಕೆ ಮಾಡಲಾಗುತ್ತದೆ.

SRC ತಂಡ, ಬಳ್ಳಾರಿ.

No comments:

Post a Comment

Thanking You For Your Valuable Comment. Keep Smile