Monday, 21 December 2015

ಮಹದಾಯಿ - ಕಳಸಾ - ಭಂಡೂರ : ಏನಿದು ವಿವಾದ?ಮಹದಾಯಿ - ಕಳಸಾ - ಭಂಡೂರ : ಏನಿದು ವಿವಾದ?

     (ಸಂಗ್ರಹ ಲೇಖನ)

           ಕರ್ನಾಟಕ ರಾಜ್ಯದ ಹುಬ್ಬಳ್ಳಿ ಭಾಗದ ಕುಡಿಯುವ ನೀರಿನ ಯೋಜನೆಯಾದ ಕಳಸಾ-ಭಂಡೂರಾ ಯೋಜನೆ ಬಗ್ಗೆ ನೆರೆಯ ಗೋವಾ ರಾಜ್ಯ ಎತ್ತಿದ್ದ ತಕರಾರು, ಕೊನೆಗೆ ಕೇಂದ್ರಸರ್ಕಾರ ನ್ಯಾಯಾಧಿಕರಣವೊಂದನ್ನು ರಚಿಸಲು ಕಾರಣವಾಗಿದೆ. ಒಂದು ಸರಿಯಾದ ರಾಷ್ಟ್ರೀಯ ಜಲನೀತಿಯಿಲ್ಲದೆ ಇಂಥಾ ಟ್ರಿಬ್ಯೂನಲ್‍ಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂಬುದು ಪ್ರಶ್ನಾರ್ಹವಾಗಿದೆ. ಕನ್ನಡಿಗರ ಪಾಲಿಗಂತೂ ಟ್ರಿಬ್ಯೂನಲ್‍ಗಳೆಂದರೇನೇ ದುಸ್ವಪ್ನದ ಹಾಗೆ, ನಮ್ಮಿಂದ ನಮ್ಮ ಪಾಲನ್ನು ಕಿತ್ತುಕೊಳ್ಳಲೆಂದೇ ಇರುವ ಹಾಗೆ, ನಮ್ಮ ಯೋಜನೆಗಳನ್ನು ತಡೆದು ವಿಳಂಬ ಮಾಡಿಸುವ ಒಂದು ತಂತ್ರದ ಹಾಗೆ ಕಾಣ್ತಾಯಿದೆ ಅನ್ನುವ ಅನುಮಾನಕ್ಕೆ ಕಾರಣವಾಗಿದೆ.
ಮಹದಾಯಿ ಹುಟ್ಟು ಮತ್ತು ಹರಿವು
        ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರದಿಂದ 18 ಕಿ.ಮೀ ದೂರದ ಪಶ್ಚಿಮ ಘಟ್ಟ ಸಾಲಿನ ಜಂಬೋತಿ ಎನ್ನುವಲ್ಲಿ ಹುಟ್ಟುವ ಮಹದಾಯಿ ನದಿ ಕರ್ನಾಟಕದಲ್ಲಿ 28.8 ಕಿ.ಮೀ ದೂರ ಹರಿದು ನೆರೆಯ ಗೋವಾ ರಾಜ್ಯವನ್ನು ಪ್ರವೇಶಿಸುತ್ತದೆ. ಗೋವಾದಲ್ಲಿ ಮಾಂಡೋವಿ ಎಂಬ ಹೆಸರಿಂದ ಕರೆಯಲಾಗುವ ಈ ನದಿಯು ಅಲ್ಲಿ 52 ಕಿ.ಮೀ ದೂರ ಸಾಗಿ ಅರಬ್ಬಿ ಸಮುದ್ರ ಸೇರುತ್ತದೆ. ಇದರ ನದಿ ಪಾತ್ರದ ಹರವು ಒಟ್ಟು 2032 ಚದರ ಕಿ.ಮೀ ಆಗಿದ್ದು ಕರ್ನಾಟಕದಲ್ಲಿ ಇದು 452 ಚ.ಕಿ.ಮೀ ಇದೆ. ಈ ನದಿಯಲ್ಲಿ ವರ್ಷವೊಂದಕ್ಕೆ ಸರಾಸರಿ 210 ಟಿ.ಎಂ.ಸಿ ನೀರು ಸಿಗುತ್ತದೆ. ಇದರಲ್ಲಿ ಕರ್ನಾಟಕದ ಪಾಲು 45 ಟಿ.ಎಂ.ಸಿಯಾಗಿದೆ. ಈ ನದಿ ಪಶ್ಚಿಮ ದಿಕ್ಕಿಗೆ ಹರಿಯುತ್ತದೆ. ಇದಕ್ಕೆ ಅತಿ ಸಮೀಪದಲ್ಲೆ ಪೂರ್ವ ದಿಕ್ಕಿಗೆ ಹರಿಯುವ ಕನ್ನಡ ನಾಡಿನ, ವಿಶೇಷವಾಗಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆಸರೆಯಾಗಿರುವ ಮಲಪ್ರಭ ನದಿ ಹುಟ್ಟುತ್ತದೆ. ಇದು ಕಳಸಾ ಭಂಡೂರದಿಂದ 4 ಕಿ.ಮೀ ದೂರದಲ್ಲಿದೆ. ಹುಬ್ಬಳ್ಳಿ ಧಾರವಾಡ ಗದಗಗಳಂತಹ ಜನವಸತಿ ಪ್ರದೇಶಗಳಲ್ಲಿ ಹತ್ತು ಹದಿನೈದು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡುವ ಶೋಚನೀಯ ಸ್ಥಿತಿಯಿದೆ. ನಗರೀಕರಣದಿಂದ ಈ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಬೇಡಿಕೆಯನ್ನು ಪೂರೈಸಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವು ಒಂದು ಮಹತ್ವದ ಯೋಜನೆಯನ್ನು ಆರಂಭಿಸಿತು.
ಕಳಸಾ-ಭಂಡೂರಾ ನಾಲೆ ಯೋಜನೆ ಮತ್ತು ವಿವಾದ
           1980ರ ಸುಮಾರಿನಲ್ಲಿ ನರಗುಂದ ರೈತ ಬಂಡಾಯದ ತರುವಾಯ ಅಂದಿನ ಮುಖ್ಯಮಂತ್ರಿ ಶ್ರೀ ಗುಂಡೂರಾವ್‍ರವರು ನೇಮಿಸಿದ್ದ ಬೊಮ್ಮಾಯಿ ಆಯೋಗ ಯೋಜನೆಯೊಂದನ್ನು ಜಾರಿಮಾಡಲು ಸಲಹೆ ನೀಡಿತು. ಮಹದಾಯಿ ನದಿಗೆ ಮತ್ತು ಅದರ ತೊರೆಗಳಿಗೆ ಹಲವಾರು ಕಡೆ ಅಣೆಕಟ್ಟೆಗಳನ್ನು ಕಟ್ಟಿ ನಾಲೆಗಳ ಮೂಲಕ ಮಲಪ್ರಭೆಗೆ 7.56 ಟಿ.ಎಂ.ಸಿಯಷ್ಟು ನೀರನ್ನು ಸರಬರಾಜು ಮಾಡುವುದೇ ಆ ಯೋಜನೆ. ಪಶ್ಚಿಮಕ್ಕೆ ಹರಿಯುತ್ತಿರುವ ಮಹದಾಯಿಯಿಂದ ಸ್ವಲ್ಪ ಮಟ್ಟಿನ ನೀರನ್ನು ಪೂರ್ವಕ್ಕೆ ಹರಿಸಿ ಮಲಪ್ರಭೆಗೆ ಪೂರೈಸುವುದೇ ಇದರ ಮೂಲ ಉದ್ದೇಶ. ಇದಕ್ಕಾಗೆ ಕಳಸ ಮತ್ತು ಭಂಡೂರ ಎಂಬ ಎರಡು ಕಡೆ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿದೆ. ಸುರ್ಲಾ ನಾಲೆ, ಸಿಂಗಾರ್ ನಾಲೆ, ನೆರ್ಸೆ ನಾಲೆ, ಕಳಸ ನಾಲೆ, ಭಂಡೂರ ನಾಲೆ, ಹಲ್ತಾರ್ ನಾಲೆಗಳು ಈ ಯೋಜನೆಯ ಅಡಿಯಲ್ಲಿ ಬರಲಿವೆ. ಇದಕ್ಕಾಗಿ ಕರ್ನಾಟಕ ಸರ್ಕಾರ 2002ರಲ್ಲಿ ಕೇಂದ್ರದ ಮಂಜೂರಾತಿಯನ್ನು ಪಡೆದು ಕೆಲಸ ಕೈಗೆತ್ತಿಕೊಂಡಿತು. ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಆರ್.ಬೊಮ್ಮಾಯಿಯವರ ಕಾಲದಲ್ಲಿ (1989) ಗೋವಾದ ಮುಖ್ಯಮಂತ್ರಿಗಳಾಗಿದ್ದ ಪ್ರತಾಪ್ ಸಿಂಗ್ ರಾಣೆಯವರ ಜೊತೆ ಮಾತುಕತೆ ನಡೆದಿದ್ದು ರಾಣೆಯವರು 45 ಟಿ.ಎಂ.ಸಿ ನೀರು ಬಳಸಲು ನಮ್ಮ ಅಡ್ಡಿಯೇನಿಲ್ಲ ಎಂದು ನುಡಿದಿದ್ದರು. ಆದರೆ ನಂತರ ಅಲ್ಲಿ ಅಧಿಕಾರಕ್ಕೆ ಬಂದ ಮನೋಹರ್ ಪರಿಕ್ಕರ್ ನೇತೃತ್ವದ ಬಿ.ಜೆ.ಪಿ ಸರ್ಕಾರ ಈ ಯೋಜನೆಗೆ ಕೊಂಕು ಎತ್ತಿತು. ಆಗ ರಾಜ್ಯದಲ್ಲಿ ಕಾಂಗ್ರೆಸ್‌ನ ಎಸ್.ಎಂ.ಕೃಷ್ಣಾ ಮುಖ್ಯಮಂತ್ರಿಗಳಾಗಿದ್ದರು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಗೋವಾದ ಒತ್ತಡಕ್ಕೆ ಮಣಿದು ಆಗಲೆ ನೀಡಲಾಗಿದ್ದ ಒಪ್ಪಿಗೆಯನ್ನು ಹಿಂಪಡೆಯಿತು.
         ಆಗ ರಾಜ್ಯ ಸರ್ಕಾರ ತನ್ನದೆ ಹಣವನ್ನು ಹೂಡಿ ಈ ಯೋಜನೆಯನ್ನು ಮುಂದುವರೆಸಲು ನಿರ್ಧರಿಸಿತು ಮತ್ತು ರಾಷ್ಟ್ರೀಯ ಜಲ ಆಯೋಗ ಮತ್ತು ರಾಷ್ಟ್ರೀಯ ಪರಿಸರ ವಿಜ್ಞಾನ ಸಂಶೋಧನಾ ಸಂಸ್ಥೆ (ನ್ಯಾಷನಲ್ ಎನ್‌ವಿರಾನ್‌ಮೆಂಟಲ್ ಇಂಜಿನಿಯರಿಂಗ್ ರೀಸರ್ಚ್ ಇನ್‌ಸ್ಟಿಟ್ಯೂಟ್) ಗಳಿಂದ ಅನುಮತಿ ಪಡೆದಿರುವುದರಿಂದ ನೀರು ಹರಿಸಿಕೊಳ್ಳುತ್ತೇವೆ ಎನ್ನುವ ನಿಲುವು ತಾಳಿತು.
ಯೋಜನೆಗೆ ವಿರೋಧ ಮಾಡುತ್ತಿರುವ ಗೋವಾ
        ಈ ಸಂಬಂಧ ದಿನಾಂಕ 22.09.2006ರಂದು ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಮುಖ್ಯಮಂತ್ರಿಗಳಾದ ಕುಮಾರ ಸ್ವಾಮಿಯವರು ಭೂಮಿ ಪೂಜೆ ನೆರವೇರಿಸಿದರು. ಇದರಿಂದ ಕನಲಿದ ಗೋವಾ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ 15.11.2006ರಲ್ಲಿ ದೂರು ಸಲ್ಲಿಸಿ ಕರ್ನಾಟಕದ ಯೋಜನೆಗೆ ತಡೆ ಆದೇಶ ನೀಡಬೇಕೆಂದೂ, ಯೋಜನೆಯನ್ನು ರದ್ದು ಮಾಡಬೇಕೆಂದೂ ಕೋರಿತು. ಸರ್ವೋಚ್ಛ ನ್ಯಾಯಾಲಯವು ದಿನಾಂಕ 27.11.2006ರಂದು ಕರ್ನಾಟಕದ ಕಾಮಗಾರಿಗೆ ತಡೆ ನೀಡಲು ನಿರಾಕರಿಸಿತು.
        ಈ ವೇಳೆಗೆ ಮಹದಾಯಿ ಬಚಾವೋ ಅಭಿಯಾನದ ಹೆಸರಲ್ಲಿ ಗೋವಾದಲ್ಲಿ ಕರ್ನಾಟಕದ ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸಿ ಹೋರಾಟ ಆರಂಭವಾಯ್ತು. ಗೋವಾ ರಾಜ್ಯ ಈ ಯೋಜನೆಯಿಂದ ತನ್ನ ರಾಜ್ಯದ ಅರಣ್ಯ ಮತ್ತು ಜೀವಸಂಕುಲಕ್ಕೆ ಹಾನಿಯಾಗುತ್ತದೆ ಎನ್ನುವ ವಾದ ಮುಂದಿಟ್ಟಿತು. ನದಿಗೆ ತಿರುವು ನೀಡುವುದರಿಂದ ಗೋವಾದ ಜೀವನದಿಯಾದ ಮಾಂಡೊವಿ ಬತ್ತಿಹೋಗಲಿದೆ ಎಂಬ ವಾದ ಮುಂದಿಟ್ಟು ಅಲ್ಲಿನ ಜನರಲ್ಲಿ ಆಂದೋಲನವುಂಟು ಮಾಡುತ್ತಿದ್ದಾರೆ. ವಾಸ್ತವವಾಗಿ 210 ಟಿ.ಎಂ.ಸಿ ಪ್ರಮಾಣದ ನೀರು ದೊರೆಯುವ ನದಿ ಮಾಂಡೋವಿಯಲ್ಲಿ ದೊರೆಯುವ 21೦ ಟಿ.ಎಂ.ಸಿಯಲ್ಲಿ 7.56 ಟಿ.ಎಂ.ಸಿ ನೀರನ್ನು ತಿರುಗಿಸಿದರೆ ನದಿ ಬತ್ತಿಹೋಗುವುದೇ? 4 ಕಿ.ಮೀ ದೂರ ನಾಲೆ ತೋಡಿದರೆ ಅರಣ್ಯ ಸಂಪತ್ತು, ಅಲ್ಲಿನ ಜೀವಸಂಕುಲ ನಾಶವಾಗುವುದೆ? ಗೋವಾಕ್ಕೆ ಪರಿಸರದ ಬಗ್ಗೆ ಕಾಳಜಿಯಿದ್ದಲ್ಲಿ ಅದೇ ಮಾಂಡೋವಿಯ ದಂಡೆಯಲ್ಲಿ ಎರಡೆರಡು ವಿದ್ಯುತ್ ಉತ್ಪದನಾ ಘಟಕಗಳನ್ನು ಯಾಕೆ ತೆರೆಯುವ ಯೋಜನೆ ಹೊಂದಿದೆ?
              ಸದ್ಯಕ್ಕೆ ಸುಪ್ರಿಂಕೋರ್ಟಿನಲ್ಲಿ ಮಹದಾಯಿ ಯೋಜನೆ ಕುರಿತು ಪ್ರಕರಣದ ವಿಚಾರಣೆ ನಡೆಯುತ್ತಿದೆ. ತೀರ್ಪು ಹೊರಬರುವ ಮುನ್ನವೇ ಈಗ ಮತ್ತೆ ಗೋವಾ ಲಾಬಿಗೆ ಮಣಿದಿರುವ ಕೇಂದ್ರ ಸರಕಾರ ನ್ಯಾಯಾಧೀಕರಣ ರಚಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಮಹದಾಯಿ ನದಿಯ ನಮ್ಮ ಪಾಲಿನ 45 ಟಿಎಂಸಿ ನೀರಿನಲ್ಲಿ 7.56 ಟಿಎಂಸಿ ತೆಗೆದುಕೊಳ್ಳಲು ಇನ್ನೂ ಹತ್ತು ಹದಿನೈದು ವರುಷಗಳು ಕಾಯಬೇಕೆ?

ಅನುಷ್ಟಾನಗೊಳ್ಳದ ಮಹದಾಯಿ ತಿರುವು ಯೋಜನೆ :ಕೇಂದ್ರ-ರಾಜ್ಯ ಸರ್ಕಾರಗಳ ಹೊಣಗೇಡಿತನಕ್ಕೆ ಸಾಕ್ಷಿ
        ಇಲ್ಲಿಯವರೆಗೆ ಆಡಳಿತ ನಡೆಸಿದ ಕೇಂದ್ರ-ರಾಜ್ಯ ಸರ್ಕಾರಗಳು ಒಂದು ನೀರಿನ ಯೋಜನೆಯನ್ನು ಕಾರ್ಯಗತಗೊಳಿಸುವ ಬಗ್ಗೆ ಇಚ್ಛಾಶಕ್ತಿಯನ್ನು ತೋರದೆ ಯೋಜನೆಯ ಅನುಷ್ಠಾನಕ್ಕೆ ದಿವ್ಯ ನಿರ್ಲಕ್ಷ್ಯ, ನಿರಾಸಕ್ತಿ ತೋರಿದಲ್ಲಿ ಆ ಯೋಜನೆ ಹೇಗೆ ನೆನೆಗುದಿಗೆ ಬೀಳುತ್ತದೆ ಎಂಬುದಕ್ಕೆ ಮಹದಾಯಿ ತಿರುವು ಯೋಜನೆ ಒಂದು ಉದಾಹರಣೆ. ಜನರಿಗೆ ಅತ್ಯಂತ ಅಗತ್ಯವಾದ ಒಂದು ಕುಡಿಯುವ ನೀರಿನ ಯೋಜನೆ ಎರಡು-ಮೂರು ದಶಕ ಕಳೆದರೂ ಜಾರಿಯಾಗಲಿಲ್ಲ. ಅಷ್ಟೆ ಅಲ್ಲ ಸರ್ಕಾರಗಳು ಸಮಸ್ಯೆಯನ್ನು ಕ್ಲಿಷ್ಠಗೊಳಿಸಿವೆ; ಕಗ್ಗಾಂಟಾಗಿಸಿವೆ. ಜನಹಿತ ಮರೆತು ತಮ್ಮ ಹೊಣೆಗೇಡಿತನ ಮೆರೆದಿವೆ.
ಏನಿದು ಮಹದಾಯ ತಿರುವು ಯೋಜನೆ?
        ಈ ಪ್ರಶ್ನೆಗೆ ನೇರ ಉತ್ತರಕ್ಕೆ ಹೋಗದೆ ಮೊದಲು ಒಂದಿಷ್ಟು ಹಿಂದಕ್ಕೆ ಹೋಗಿ ಮಲಪ್ರಭಾ ನೀರಾವರಿ ಯೋಜನೆ ಕುರಿತು ತಿಳಿಯೋಣ. ಮೇಲಿಂದ ಮೇಲೆ ಬರಗಾಲಕ್ಕೆ ತುತ್ತಾಗುತ್ತಿದ್ದ ಗದಗ ಜಿಲ್ಲೆಯ ನರಗುಂದ, ರೋಣ, ಧಾರವಾಡ ಜಿಲ್ಲೆಯ ನವಲಗುಂದ ಹಾಗೂ ಬೆಳಗಾವಿ ಜಿಲ್ಲೆಯ ಸವದತ್ತಿ ಬೈಲಹೊಂಗಲ ತಾಲೂಕುಗಳಿಗೆ ನೀರಾವರಿಯ ಅಗತ್ಯತೆ ಇತ್ತು. ಈ ಭಾಗದ ಕುಡಿಯುವ ನೀರಿನ ಅಭಾವ ಹೇಳತೀರದಾಗಿತ್ತು.
            ಅದಕ್ಕಾಗಿ ರೂಪಗೊಂಡದ್ದು ಮಲಪ್ರಭಾ ನೀರಾವರಿ ಯೋಜನೆ. ಸವದತ್ತಿ ಹತ್ತಿರ `ನವಿಲು ತೀರ್ಥ ಬಳಿ ಮಲಪ್ರಭಾ ನದಿಗೆ ಅಣೆಕಟ್ಟೆ ನಿರ್ಮಿಸಿ 5.27 ಲಕ್ಷ ಎಕರೆ ಭೂಮಿಗೆ ನೀರು ಒದಗಿಸುವ ಯೋಜನೆ ಇದಾಗಿತ್ತು. ಯೋಜನೆಯ ಕಾರ್ಯ 1961 ರಲ್ಲಿ ಪ್ರಾರಂಭಗೊಂಡು 1972-73ರ ಸುಮಾರಿಗೆ ಪೂರ್ಣಗೊಂಡಿತು. ಈ ಜಲಾಶಯ 37 ಟಿಎಂಸಿ ನೀರಿನ ಸಂಗ್ರಾಹಕ ಸಾಮಥ್ರ್ಯ ಹೊಂದಿದೆ. ಆದರೆ ಇಲ್ಲಿಯವರೆಗೆ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು 3-4 ಬಾರಿ ಮಾತ್ರ. ಹೀಗಾಗಿ ಘೋಷಿಸಿದ ಕ್ಷೇತ್ರಗಳಿಗೆ ನಿರೀಕ್ಷಿಸಿದ ಪ್ರಮಾಣದಲ್ಲಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಇಷ್ಟಾಗಿ ರೋಣ ತಾಲೂಕಿನ 1.11 ಲಕ್ಷ ಎಕರೆ ಭೂಮಿಗೆ ನೀರು ಒದಗಿಸಲು ಘೋಷಿಸಿದ್ದರೂ ನೀರು ಲಭ್ಯವಾಗಿಲ್ಲ. ಮಲಪ್ರಭಾ ಜಲಾಶಯ(ರೇಣುಕಾಸಾಗರ)ದಲ್ಲಿ ನೀರಿನ ಸಂಗ್ರಹ ಕಡಿಮೆಯಾದ ಕಾರಣ ಮಳೆಯ ಕೊರತೆ ಒಂದು ಕಡೆಯ ಸಮಸ್ಯೆಯಾದರೆ, ನದಿ ನೀರು ಜಲಾಶಯ ತಲುಪುವ ಪೂರ್ವದಲ್ಲೇ ರೈತರಿಂದ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುವುದು ಇನ್ನೊಂದು ಕಡೆಯ ಸಮಸ್ಯೆ. ಇದರೊಂದಿಗೆ ಮಲಪ್ರಭಾ ಜಲಾಯನ ಪ್ರದೇಶ ಕಿರಿದಾಗಿದೆ.

        ನೀರಿನ ಕೊರತೆ ನೀಗಲು- ರೇಣುಕಾಸಾಗರದ ನೀರಿನ ಕೊರತೆಯನ್ನು ನೀಗಲು ಸಿದ್ಧವಾದ ಯೋಜನೆಯೇ ಮಹದಾಯಿ ತಿರುವು ಯೋಜನೆ. ಮಲಪ್ರಭಾ ನದಿಯಂತೆ ಮಹದಾಯಿ ನದಿ ಕೂಡಾ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನಲ್ಲಿ ಉಗಮವಾಗಿದೆ. ಸಹ್ಯಾದ್ರಿ ಬೆಟ್ಟದಲ್ಲಿ ಸಮುದ್ರ ಮಟ್ಟದಿಂದ 914 ಮೀ. ಎತ್ತರದಲ್ಲಿ ಹುಟ್ಟಿದ ಈ ನದಿ ಕರ್ನಾಟಕದಲ್ಲಿ 29 ಕಿ.ಮೀ. ಕ್ರಮಿಸಿ ಗೋವಾ ರಾಜ್ಯದಲ್ಲಿ ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಗೋವಾದಲ್ಲಿ `ಮಾಂಡೋವಿ’ ಎಂದು ಹೆಸರು. ಮಹದಾಯಿ ನದಿಗೆ ಹಲತಾರಾ, ಕಳಸಾ, ಬಂಡೂರಿ, ಕಾರಂಜೋಳ, ಬೊಮ್ಮನರಿ ದೂದ ಸಾಗರ ಹೀಗೆ ಅನೇಕ ಉಪನದಿಗಳಿಂದ ಕೂಡಿದ ನದಿ ಕಣಿವೆ ಆಗಿದೆ. ಇದು ಹೆಚ್ಚು ಮಳೆಬೀಳುವ ಪ್ರದೇಶವಾಗಿದ್ದು ಸರಾಸರಿ 3,134 ಮಿಲಿಮೀಟರ್ ಮಳೆ ಬೀಳುತ್ತದೆ. ಮಹಾದಾಯಿ ನದಿ ಕಣಿವೆಯಿಂದ ಕಾಲುವೆ ಮೂಲಕ ಮಲಪ್ರಭಾ ನದಿಗೆ ನೀರು ವರ್ಗಾಯಿಸುವುದೇ ಈ ಯೋಜನೆಯ ಉದ್ದೇಶ.
ಗೋವಾದ ವಿರೋಧ - 1978ರಲ್ಲಿಯೇ ಈ ಯೋಜನೆ ಸಿದ್ಧವಾದರೂ ಕಾರ್ಯರೂಪಕ್ಕೆ ಬರಲಿಲ್ಲ. ಇದನ್ನೊಂದು ಜಲವಿದ್ಯುತ್ ಯೋಜನೆಯಾಗಿ ಮಾರ್ಪಡಿಸಿ ಮಹಾದಾಯಿ ಜಲಾಯನ ಪ್ರದೇಶದಿಂದ 9 ಟಿಎಂಸಿ ನೀರನ್ನು ಮಲಪ್ರಭಾಗೆ ವರ್ಗಯಿಸಿ ವಿದ್ಯುತ್ ಉತ್ಪಾದನೆಗೂ ಯೋಜಿಸಲಾಗಿತ್ತು. (5-11-1988)1988 ರಲ್ಲಿ ಇದಕ್ಕೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿತು. ಆದರೆ ಗೋವಾ ಸರ್ಕಾರದ ತೀವ್ರ ವಿರೋಧದಿಂದ ಯೋಜನೆಗೆ ತಡೆಯಾಯಿತು. ಮಹಾದಾಯಿ 2,032 ಚ.ಕಿ.ಮೀ. ಜಲಾನಯನ ಪ್ರದೇಶ ಹೊಂದಿದ್ದು ಅದರಲ್ಲಿ ಕರ್ನಾಟಕದ ಪಾಲು 412 ಚ.ಕಿ.ಮೀ. ಕೇಂದ್ರದ ಜಲ ಆಯೋಗದ ಸಮೀಕ್ಷೆಯಂತೆ ನದಿಯಲ್ಲಿ ಒಟ್ಟು 210 ಟಿಎಂಸಿ ನೀರು ಲಭ್ಯವಿದ್ದು ಕರ್ನಾಟಕ 45 ಟಿಎಂಸಿ ನೀರಿನ ಪಾಲಿನ್ನು ಹೊಂದಿದೆ. ಗೋವಾ ಸರ್ಕಾರ ಮಹದಾಯಿ ನದಿಗೆ ಜಲವಿದ್ಯುತ್ ಆಗಲಿ, ಇತರ ಇನ್ನಾವುದೆ ಯೋಜನೆಯನ್ನೂ ರೂಪಿಸಿಲ್ಲ. ಕರ್ನಾಟಕ ತನ್ನ ಪಾಲಿನ ನೀರು ಪಡೆಯಲು ಯೋಜನೆ ರೂಪಿಸಿದರೂ ಅದಕ್ಕೆ ಗೋವಾ ಆತಂಕ ಒಡ್ಡುತ್ತಿದೆ. `ತಾನೂ ತಿನ್ನ ಪರರಿಗೂ ಕೂಡ’ ಎನ್ನುವ ನೀತಿ ಇದೆ ಅಲ್ಲವೆ?
ಕಳಸಾ-ಬಂಡೂರಿ ಯೋಜನೆ :
               ಕಳಸಾ ಹಳ್ಳವು ಕರ್ನಾಟಕದಲ್ಲಿ ಹುಟ್ಟಿ ದಕ್ಷಿಣಾಭಿಮುಖವಾಗಿ ಹರಿದು ಗೋವಾದಲ್ಲಿ ಮಹದಾಯಿ ನದಿಯನ್ನು ಸೇರುತ್ತದೆ. ಕರ್ನಾಟಕದಲ್ಲಿ 24 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿದ್ದು ಕೆಲವು ಉಪ ಹಳ್ಳಗಳು ಕರ್ನಾಟಕದಲ್ಲಿ ಹುಟ್ಟಿ ಗೋವಾದಲ್ಲಿ ಕಳಸಾ ಹಳ್ಳವನ್ನು ಸೇರುತ್ತವೆ. ಈ ಹಳ್ಳದಿಂದ 3.56 ಟಿಎಂಸಿ ನೀರನ್ನು ಪಡೆಯುವ ಉದ್ದೇಶದಿಂದ ಯೋಜನೆ ತಯಾರಿಸಲಾಗಿದೆ. ಕಳಸಾ ಯೋಜನೆಗೆ ಎರಡು ಅಣೆಕಟ್ಟೆಗಳನ್ನು ನಿರ್ಮಿಸುವುದು.
(1) ಕಳಸಾ ಹಳ್ಳಕ್ಕೆ ಅಣೆಕಟ್ಟು ಹಾಗೂ 4.8 ಕಿ.ಮಿ. ಉದ್ದದ ಕಾಲುವೆ ನಿರ್ಮಾಣ.
(2) ಹಳತಾರ ಹಳ್ಳಕ್ಕೆ ಅಣೆಕಟ್ಟು ನಿರ್ಮಿಸಿ ಅಲ್ಲಿ ಸಂಗ್ರಹವಾದ ನೀರನ್ನು 5.5 ಕಿ.ಮೀ. ಉದ್ದದ ಕಾಲುವೆಯ ಮೂಲಕ ಕಳಸಾ ಅಣೆಕಟ್ಟೆಗೆ ಸಾಗಿಸುವುದು.
           ಇದರ ಒಟ್ಟು ವೆಚ್ಚ ಯೋಜನೆ ರೂಪಿಸಿದಾಗ 44 ಕೋಟಿ ರೂ.ಗಳು. ಆದರೆ ಈಗ ಅದರ ವೆಚ್ಚ 428 ಕೋಟಿ ರೂ.ಗಳು. ಇಲ್ಲಿಯವರೆಗೆ ಮಾಡಿದ ವೆಚ್ಚ 125 ಕೋಟಿ ರೂ.ಗಳು. ಆದರೂ ಯೋಜನೆ ಅಪೂರ್ಣವಾಗಿದೆ.
        ಬಂಡೂರಿ ಮಹದಾಯಿ ನದಿಯ ಇನ್ನೊಂದು ಉಪನದಿ. ಸಿಂಗಾರ ನಾಲಾ ಹಾಗೂ ವಾಟಿ ನಾಲಾಗಳಿಗೆ ಅಣೆಕಟ್ಟು ಕಟ್ಟಿ ಸಂಗ್ರಹವಾದ ನೀರನ್ನು ಬಂಡೂರಿ ಜಲಾಶಯಕ್ಕೆ ವರ್ಗಯಿಸುವುದು ಇಲ್ಲಿ ಸಂಗ್ರಹವಾದ 4 ಟಿಎಂಸಿ ನೀರನ್ನು ಕಾಲುವೆ ಮೂಲಕ ಮಲಪ್ರಭಾ ನದಿಗೆ ವರ್ಗಯಿಸುವುದು. ಬಂಡೂರ ನಾಲಾ ಯೋಜನೆಗೊಳಪಡುವ ಜಲಾನಯನ ಪ್ರದೇಶ 32.25 ಚ.ಕಿ.ಮೀ. ಇದರಿಂದ ಒಟ್ಟು 380 ಹೆಕ್ಟೇರ್ ಭೂಮಿ ಮುಳುಗಡೆ ಆಗಲಿದೆ. ಇದರ ವೆಚ್ಚ ಯೋಜನೆ ತಯಾರಿಸುವಾಗ 49 ಕೋಟಿ ರೂ.ಗಳು. ಈಗ ಅದರ ವೆಚ್ಚ 370 ಕೋಟಿ ರೂ. ಆಗಿದೆ.
        ಈ ಎರಡೂ ಯೋಜನೆಗಳಿಂದ ಒಟ್ಟು 7.56 ಟಿಎಂಸಿ ನೀರು ಲಭ್ಯವಾಗಲಿದೆ. ಇದುವೆ ಕಳಸಾ-ಬಂಡೂರಿ ನಾಲಾ ಯೋಜನೆ. ಯೋಜನೆಯ ಅನುಷ್ಠಾನ ತಡವಾಗುವುದರಿಂದ ನಿರ್ಮಾಣ ವೆಚ್ಚದ ಏರಿಕೆಯಾಗುತ್ತದೆ ಎನ್ನುವುದು ಮೇಲಿನ ಅಂಕಿಅಂಶಗಳಿಂದ ವೇದ್ಯವಾಗುತ್ತದೆ. ಈ ಹಣ ಬಡ ಬೋರೇಗೌಡನ ಹೆಗಲಿಗೆ ಭಾರವಾಗದೆ?
ಯಾಕೆ ಈ ಯೋಜನೆಗಳು?
ಗೋವಾ ಸರ್ಕಾರದ ನಿರಂತರ ವಿರೋಧದಿಂದಾಗಿ ಮಹದಾಯಿ ತಿರುವು ಯೋಜನೆ ಅನುಷ್ಠಾನಗೊಳ್ಳಲಿಲ್ಲ. ಆದರೆ ರೇಣುಕಾಸಾಗರದಲ್ಲಿ ನೀರಿನ ಕೊರತೆ ನೀಗಲು ಮಹದಾಯಿ ನದಿ ಕೊಳ್ಳದಿಂದ ಸ್ವಲ್ಪ ನೀರನ್ನು ವರ್ಗಯಿಸಲೇಬೇಕೆಂಬ ಉದ್ದೇಶದಿಂದ ಕಳಸಾ-ಬಂಡೂರಿ ನಾಲಾ ಯೋಜನೆ ರೂಪಿಸಲಾಯಿತು. ಗೋವಾ ಗಡಿಯಿಂದ ಈಚೆಗೆ ಈ ಎರಡು ನಾಲೆಗಳಿಗೆ ಆಣೆ ಕಟ್ಟಿ ನಿರ್ಮಿಸಿ ನೀರು ಪಡೆಯುವ ಯೋಜನೆ ಇದಾಗಿದೆ. ಇದಕ್ಕೂ ಗೋವಾದ ತಕರಾರು ಇದೆ.
ಒಂದು ಹಂತದಲ್ಲಿ ಗೋವಾ ಮತ್ತು ಕರ್ನಾಟಕ ಸರ್ಕಾರಗಳ ನಡುವೆ ಜಲವಿದ್ಯುತ್ ಯೋಜನೆಗೆ ಒಪ್ಪಂದವಾಗಿತ್ತು. ದಿ. 10-9-1996 ರಂದು ಗೋವಾ ಸರ್ಕಾರದ ನೀರಾವರಿ ಮಂತ್ರಿ ಹಾಗೂ ಕರ್ನಾಟಕದ ಸರ್ಕಾರದ ನೀರಾವರಿ ಸಚಿವರ ಒಂದು ಸಭೆ ನಡೆದು ಜಲವಿದ್ಯುತ್ ಯೋಜನೆ ಮತ್ತು ಕಳಸಾ-ಹರತಾರ ನದಿಗಳಿಂದ ನೀರು ವರ್ಗವಣೆ ಕುರಿತು ಚಚರ್ೆಯಾಗಿ ಕಳಸಾ ಯೋಜನೆಯಿಂದ 1.5 ಟಿಎಂಸಿ ನೀರನ್ನು ಮಾಂಡೋವಿ ಯೋಜನೆಗೆ ಹರಿಸುವ ಕರಾರಿನೊಂದಿಗೆ ಈ ಯೋಜನೆಗೆ ಒಪ್ಪಂದವಾಯಿತು. ಆದರೆ 5-3-1997 ರಂದು ಗೋವಾ ಸರ್ಕಾರ ನೀರು ವರ್ಗಯಿಸುವುದಕ್ಕೆ ಒಪ್ಪಿಗೆ ಆಗಿಲ್ಲ ಎಂದು ತಿಳಿಸಿತು.
ಗೋವಾದ ವಾದವೇನು?
(1) ಮಹದಾಯಿ ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಒಂದು ಕಣಿವೆ ಪ್ರದೇಶವಾಗಿದೆ. ಆದ್ದರಿಂದ ನೀರಿನ ಕೊರತೆ ಇರುವ ಕಣಿವೆಯಿಂದ ನೀರನ್ನು ಬೇರೆಡೆಗೆ ವರ್ಗಯಿಸುವುದು ಸೂಕ್ತವಲ್ಲ.
(2) ಮಹದಾಯಿ ನದಿ ನೀರನ್ನು ಬೇರೆಡೆಗೆ ವರ್ಗಯಿಸಿದರೆ ಪಶ್ಚಿಮ ಘಟ್ಟದ ಪರಿಸರದ ಮೇಲೆ ತೀವ್ರ ಪರಿಣಾಮ ಉಂಟಾಗುವುದು.

           ಆದರೆ ಅಧ್ಯಯನಗಳು ಮತ್ತು ಸಮೀಕ್ಷೆಗಳು ಗೋವಾದ ವಾದದಲ್ಲಿರುವ ಪೊಳ್ಳುತನವನ್ನು ಎತ್ತಿತೋರಿಸಿವೆ. ಕೇಂದ್ರ ಸರ್ಕಾರದ ಸಲಹೆಯಂತೆ ಕರ್ನಾಟಕ ಸರ್ಕಾರ ಮಾಡಿಕೊಂಡ ಮನವಿ ಮೇರೆಗೆ ಮಧ್ಯಪ್ರವೇಶದ ನಾಗಪೂರದಲ್ಲಿರುವ `ನೀರಿ’ ಅಧ್ಯಯನ ನಡೆಸಿ ಮಹದಾಯಿ ತಿರುವು ಯೋಜನೆಯಿಂದ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲವೆಂದೂ ಮತ್ತು ಮಹದಾಯಿ ಕಣಿವೆ ನೀರಿನ ಕೊರತೆ ಇರುವ ಪ್ರದೇಶ ಅಲ್ಲವೇ ಅಲ್ಲವೆಂದೂ ತಿಳಿಸಿತು. ಅದರಂತೆ ರಾಷ್ಟ್ರೀಯ ನೀರಿನ ಅಭಿವೃದ್ಧಿ ಸಂಸ್ಥೆ ಹಾಗೂ ಕೇಂದ್ರ ಜಲ ಆಯೋಗಗಳು ಕೂಡಾ ಅಧ್ಯಯನ ನಡೆಸಿ ಗೋವಾದ ವಾದದಲ್ಲಿ ಹುರುಳಿಲ್ಲ ಎಂಬುದನ್ನು ತಿಳಿಸಿವೆ. ಆದರೆ ಗೋವಾ ಸರಕಾರ ಮಾತ್ರ ಈ ಯಾವ ವರದಿಯನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲ ಅಷ್ಟೆ.
ಕಳಸಾ-ಬಂಡೂರಿ ನಾಲಾ ಯೋಜನೆಗೆ ಕೇಂದ್ರದ ಒಪ್ಪಿಗೆ ಹಾಗೂ ತಡೆ:
    ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಹಾಗೂ ಇತರ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸಲು ಈ ಯೋಜನೆ ಅಗತ್ಯ ಎಂಬುದನ್ನು ಕರ್ನಾಟಕ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಕೇಂದ್ರ ಜಲ ಆಯೋಗ ದಿ. 30-4-2001 ರಂದು ಯೋಜನೆಗೆ ತನ್ನ ತಾತ್ವಿಕ ಒಪ್ಪಿಗೆ ನೀಡಿತು. ಅದರೊಂದಿಗೆ ಕೆಲವು ಕರಾರುಗಳನ್ನು ವಿಧಿಸಿತು.
(1) 7.56 ಟಿಎಂಸಿ ನೀರನ್ನು ಕೇವಲ ಮಾನ್ಸೂನ್ ಮಳೆಗಾಲದಲ್ಲಿ ಮಾತ್ರ ವರ್ಗಯಿಸುವುದು.
(2) ನೀರನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಕುಡಿಯಲು ಮಾತ್ರ ಬಳಸುವುದು.
(3) ಅಂತರರಾಜ್ಯ ನೀರಿನ ಹಂಚಿಕೆಯಾದಾಗ ಕರ್ನಾಟಕದ ಪಾಲಿನಲ್ಲಿ ಈ 7.56 ಟಿಎಂಸಿ ನೀರನ್ನು ಹೊಂದಾಣಿಕೆ ಮಾಡಿಕೊಳ್ಳುವುದು.
(4) ಕರ್ನಾಟಕವು ಕೇಂದ್ರ ಜಲ ಆಯೋಗಕ್ಕೆ ಈ ಯೋಜನೆಗಳ ಎಲ್ಲ ತಾಂತ್ರಿಕ ಮಾಹಿತಿ ಒದಗಿಸುವುದು. ಕರ್ನಾಟಕವು ಭವಿಷ್ಯದಲ್ಲಿ ಹೆಚ್ಚಿನ ನೀರನ್ನು ವರ್ಗಯಿಸುವುದಿಲ್ಲ ಎಂಬುದನ್ನು ನೀಲಿ ನಕ್ಷೆಗಳಿಂದ ಖಾತ್ರಿ ಮಾಡಿಕೊಳ್ಳುವುದು.
(5) ಕೇಂದ್ರ ಜಲ ಆಯೋಗ ತಂತ್ರಜ್ಞರು, ಅಧಿಕಾರಿಗಳ ಯೋಜನಾ ಸ್ಥಳದ ಪರಿವೀಕ್ಷಣೆಗೆ ಮತ್ತು
(6) ಗೋವಾ ಹಾಗೂ ಮಹಾರಾಷ್ಟ್ರದ ಅಧಿಕಾರಿಗಳ ತಂಡ ಭೇಟಿ ಮಾಡಬಯಸಿದರೆ ಅವರ ಪರಿವೀಕ್ಷಣೆಗೆ ಅನುಮತಿಸುವುದು ಹಾಗೂ ಅನುಕೂಲ ಮಾಡಿಕೊಡುವುದು.
(7) ಉದ್ದೇಶಿತ ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕವು ಅಂಗೀಕೃತ ವಿಧಾನಗಳನ್ನು ಬಳಸುವುದು.
ಕೇಂದ್ರ ಜಲ ಆಯೋಗ ನೀಡಿದ ತಾತ್ವಿಕ ಒಪ್ಪಿಗೆ ಕರ್ನಾಟಕದ ಜನತೆಯನ್ನು ಬಹುಕಾಲ ಸಂತಸ ಪಡಿಸಲಿಲ್ಲ. ಗೋವಾ ಸರ್ಕಾರದ ಹಠಮಾರಿತನ, ವಿರೋಧ ಹಾಗೂ ಆಕ್ಷೇಪಣೆಗಳಿಗೆ ಒಪ್ಪಿಗೆ ನೀಡಿದ 5 ತಿಂಗಳಲ್ಲೇ ಕೇಂದ್ರ ಅಸ್ತು ಎಂದಿತು. ಅಂದರೆ ದಿ. 19-9-2002 ರಂದು ಕೇಂದ್ರ ಜಲ ಆಯೋಗ ತಾತ್ವಿಕ ಒಪ್ಪಿಗೆಗೆ ತಡೆಯಾಜ್ಞೆ ನೀಡಿತು.
ಕರ್ನಾಟಕದ ಮನವಿ-ಪತ್ರ
ಕರ್ನಾಟಕದಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಾ ಕಾಂಗ್ರೆಸ್ ಸರ್ಕಾರ ಗೋವಾದ ಮುಖ್ಯಮಂತ್ರಿಗೆ ಪತ್ರಬರೆದು ಹುಬ್ಬಳ್ಳಿ-ಧಾರವಾಡ ನಗರಗಳಿಗೆ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ಅವಶ್ಯಕತೆಯನ್ನು ಮನವರಿಕೆ ಮಾಡಲು ಪ್ರಯತ್ನಿಸಿದರು. ಜಲ ಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ. ಪಾಟೀಲ ತಡೆಯಾಜ್ಞೆ ತೆರವುಗೊಳಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದರು. ಅದು ಫಲ ನೀಡಲಿಲ್ಲ. ಕೇಂದ್ರದ ಜಲಸಂಪನ್ಮೂಲ ಸಚಿವರಾಗಿದ್ದ ಅಜರ್ುನ ತರಣ ಸೇಥಿ ಅವರು ದಿ. 20-12-2002 ರಂದು ಮಹದಾಯಿ ನೀರಿನ ವಿವಾದ ಕುರಿತು ಚಚರ್ಿಸಲು ದೆಹಲಿಯಲ್ಲಿ ಅಂತರ ರಾಜ್ಯ ಸಭೆ ಕರೆದರು. ಅಂತರರಾಜ್ಯ ನದಿ ನೀರು ಹಂಚಿಕೆ ವಿವಾದ ಕಾಯ್ದೆ 1956ರ 3ನೇ ವಿಧಿ ಪ್ರಕಾರ ಈ ಸಭೆಯನ್ನು ಕರೆಯಲಾಗಿತ್ತು. ಈ ಸಭೆಗೆ ಕರ್ನಾಟಕದ ಜಲಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ. ಪಾಟೀಲ, ದೆಹಲಿಯಲ್ಲಿ ಕರ್ನಾಟಕದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಗೋವಾ ಮುಖ್ಯಮಂತ್ರಿ ಮನೋಹರ ಪಾರಿಕ್ಕರ ಜಲಸಂಪನ್ಮೂಲ ಸಚಿವ ಫಿಲಿಫ್ ರೋಡ್ರಿಗ್ಸ್ ಭಾಗವಹಿಸಿದ್ದರು. ಇವರಲ್ಲದೆ ಕೇಂದ್ರ ಹಾಗೂ ಎರಡೂ ರಾಜ್ಯಗಳ ಅನೇಕ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಗೋವಾದ ಮುಖ್ಯಮಂತ್ರಿ ಅದೇ ಮೊಂಡುವಾದ ಮುಂದಿಟ್ಟರು. ಮಹದಾಯಿ ಕಣಿವೆಯಲ್ಲಿ ನೀರಿನ ಲಭ್ಯತೆಯ ನಿಖರವಾದ ಅಂದಾಜು ಇಲ್ಲದಿರುವುದು, ಕಣಿವೆ ನೀರು ಕಣಿವೆ ಒಳಗೆ ಬಳಕೆಯಾದರೆ ಅದರ ಮರುಬಳಕೆ ಸಾಧ್ಯವೆಂಬುದು, ಅಧ್ಯಯನ ವರದಿಗಳ ಬಗೆಗೆ ಅವಿಶ್ವಾಸ, ಪರಿಸರದ ಮೇಲಾಗುವ ದುಷ್ಪರಿಣಾಮ ಈ ಅಂಶಗಳನ್ನು ಒಳಗೊಂಡು ಅವರು ವಾದ ಮಂಡಿಸಿದರು.
ಕರ್ನಾಟಕದ ವಾದ
        ಕರ್ನಾಟಕದ ಜಲಸಂಪನ್ಮೂಲ ಸಚಿವರು ವಸ್ತುನಿಷ್ಠವಾದ ವರದಿ ಮಂಡಿಸಿದರು. ನದಿ ಕಣಿವೆಯಿಂದ ನೀರಿನ ವರ್ಗವಣೆ ಮಾಡಿದರೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮವಾಗುವುದಿಲ್ಲ ಎಂಬ `ನೀರಿ’ ವರದಿ ಪ್ರಸ್ತಾಪ ಮಾಡಿದರು. ಅದು ಅಲ್ಲದೆ ಈ ಹಿಂದೆ ಇಂಥ ವಿವಾದಗಳಲ್ಲಿ ತಾತ್ವಿಕ ಒಪ್ಪಿಗೆ ನೀಡಿದ ಅನೇಕ ಉದಾಹರಣೆಗಳನ್ನು ನೀಡಿದರು.
ಉದಾ : (1) ಕೇಂದ್ರ ಜಲಸಂಪನ್ಮೂಲ ಮಂತ್ರಾಲಯ 1997 ರಲ್ಲಿ ಬೆಂಗಳೂರು ನಗರಕ್ಕೆ 9.46 ಟಿಎಂಸಿ ನೀರಿನ ವರ್ಗವಣೆಗೆ ಅನುಮತಿಸಿದ್ದು.
(2) 1998 ರಲ್ಲಿ ಹೊಗೆನಕಲ್(ತಮಿಳುನಾಡು)ಗೆ ಕುಡಿಯುವ ನೀರಿಗಾಗಿ ಕಾವೇರಿ ನದಿಯಿಂದ 1.4 ಟಿಎಂಸಿ ನೀರು ವರ್ಗವಣೆಗೆ ಅನುಮತಿಸಿದ್ದು ಮುಂತಾದ ಅನೇಕ ಉದಾಹರಣೆಗಳನ್ನು ನೀಡಿದರು.
        ಕರ್ನಾಟಕದ ಬೇಡಿಕೆ ಎಷ್ಟೇ ನೈಜವಾಗಿದ್ದರೂ ಅದನ್ನು ಒಪ್ಪದ ಮನಸ್ಸುಗಳು ಅಲ್ಲಿದ್ದವು. ತನ್ನ ಮೊಂಡುವಾದವೆ ಗೆಲ್ಲಬೇಕೆಂಬ ಗೋವಾ ಸರ್ಕಾರ, ಇಚ್ಛಾಶಕ್ತಿಯನ್ನು ಮೆರೆಯದ, ನಿಣರ್ಾಯಕ ಪಾತ್ರವಹಿಸದ ಕೇಂದ್ರ ಜಲಸಂಪನ್ಮೂಲ ಮಂತ್ರಾಲಯ.. ಇವುಗಳ ಒಟ್ಟು ಫಲಶೃತಿಯಾಗಿ ಸಭೆ ನಿರರ್ಥಕತೆವಾದಂತಾಯಿತು.

ಜನ ಚಳುವಳಿ
        ಈ ಸಮಯದಲ್ಲಿ ಕಳಸ-ಬಂಡೂರಿ ನಾಲೆಗಳ ಜೋಡಣೆಗೆ ಒತ್ತಾಯಿಸಿ ಕರ್ನಾಟಕದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಚಳುವಳಿಗಳು ನಡೆದವು. ಕಳಸಾ -ಬಂಡೂರಿ ನಾಲಾ ಜೋಡಣಾ ಹೋರಾಟ ಹಾಗೂ ರೈತ ನಾಗರಿಕ ಹಿತರಕ್ಷಣಾ, ಕೇಂದ್ರ ಸಮಿತಿ ಹೋರಾಟಕ್ಕೆ ನೇತೃತ್ವ ನೀಡಿತು. ಚಳುವಳಿಯ ಪ್ರಖರತೆ ಎಷ್ಟಿತ್ತೆಂದರೆ ಇನ್ನೊಂದು ನರಗುಂದ ರೈತ ಬಂಡಾಯದ ಎಲ್ಲ ಲಕ್ಷಣಗಳು ತೋರಿದವು. ಅದೇ ವೇಳೆಯಲ್ಲಿ ಕರ್ನಾಟಕದ ಬಿಜೆಪಿ ಮುಖಂಡರು “ಕಳಸಾ-ಬಂಡೂರಿ ನಾಲಾ ಜೋಡಣೆಗೆ ಎಸ್.ಎಂ. ಕೃಷ್ಣಾ ಸರ್ಕಾರ ಮನಸ್ಸು ಮಾಡುತ್ತಿಲ್ಲ ಎಂದು ಬೊಬ್ಬೆ ಹಾಕಿ ತಿರುಗಾಡಿದರು. ಆದರೆ 2004 ರಲ್ಲಿ ಸಾರ್ವತ್ರಿಕ ಚುನಾವಣೆಗಳು ಹತ್ತಿರ ಬಂದಂತೆ ಹೋರಾಟದ ತೀವ್ರತೆ ಕಡಿಮೆ ಆಗಿ, ಹೋರಾಟ ಸಮಿತಿಯ ಮುಖಂಡರೊಬ್ಬರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ,ಅದು ದಕ್ಕದಾದಾಗ ಜೆಡಿ(ಎಸ್) ಪಕ್ಷದ ಅರ್ಭಥಿಯಾಗಿ ವಿಧಾನ ಸಭೆಗೆ ಸ್ವರ್ಧಿಸಿದರು. ಹೋರಾಟ ತನ್ನ ಬಿಸಿ ಕಳೆದುಕೊಂಡಿತು.ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್- ಜೆಡಿ(ಎಸ್) ಸಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆಗ ಬಿಜೆಪಿ ಕಳಸಾ ಬಂಡೂರಿ ಹೋರಾಟವನ್ನು ಕೈಗೆತ್ತಿಕೊಂಡಿತು. ಬಿಜೆಪಿ ಮತ್ತು ಜೆಡಿ ಜಂಟಿಯಾಗಿ ನವಿಲು ತೀರ್ಥದಲ್ಲಿ ಬೃಹತ್ ಸಮಾವೇಶ,ನಂತರ ತಾಲೂಕ್ ಸ್ಥಳಗಳಲ್ಲಿ ಧರಣಿ ನಡೆಸಲಾಯಿತು.ಸಂಸದರ ಒಂದು ನಿಯೋಗ ಕೇಂದ್ರಕ್ಕೆ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಲು ವಿನಂತಿಸಿಕೊಂಡಿತು.(ಮೊದಲು ಕೇಂದ್ರದ ಮಧ್ಯಪ್ರವೇಶ ಬೇಕಾಗಿಲ್ಲವೆಂದು ವಾದಿಸುತ್ತಿದ್ದ ಜನ ಇವರು)ರಾಜ್ಯದಲ್ಲಿ ಜೆಡಿ(ಎಸ್)-ಬಿಜೆಪಿ ಸಮಿಶ್ರ ಸರ್ಕಾರ ರಚನೆಯಾಗುವುದರೊಂದಿಗೆ ಕಳಸಾ ಬಂಡೂರಿ ಹೋರಾಟ ಅನಾಥವಾಯಿತು.
ನ್ಯಾಯಾಧಿಕರಣ ನೇಮಕ :
        ಗೋವಾ ಸರ್ಕಾರ ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ದಿ. 9-7-2002 ರಂದು ಪತ್ರ ಬರೆದು ನ್ಯಾಯಾಧಿಕರಣ ರಚಿಸುವಂತೆ ಕೇಳಿಕೊಂಡಿತು. ಅದಲ್ಲದೆ 2006ರಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಕಳಸಾ ಬಂಡೂರಿ ಕಾಮಗಾರಿ ತಡೆಯುವಂತೆ ಹಾಗೂ ನ್ಯಾಯಾಧಿಕರಣ ನೇಮಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕೆಂದು ವಿನಂತಿಸಿತು. ನವೆಂಬರ್ 2006ರಲ್ಲಿ ಕೇಂದ್ರ ಮಂತ್ರಾಲಯ ಕರ್ನಾಟಕ ಸರ್ಕಾರವನ್ನು ಸಂಪರ್ಕಿಸಿ “ಈ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ಅಸಾಧ್ಯ ಎಂಬ ಅಭಿಪ್ರಾಯ ಈ ಮಂತ್ರಾಲಯದ್ದಾಗಿದೆ. ಮುಂದಿನ ಕ್ರಮವನ್ನು 1956ರ ಅಂತರರಾಜ್ಯ ಜಲವಿವಾದ ಕಾಯ್ದೆ ಮೇರೆಗೆ ಕ್ರಮ ಜರುಗಿಸಲಾಗುವುದು.” ಎಂದು ತಿಳಿಸಿತು. ಕೇಂದ್ರ ಸರ್ಕಾರ ನವೆಂಬರ್ 16, 2010 ರಂದು `ಮಹದಾಯಿ ಜಲವಿವಾದ ನ್ಯಾಯಾಧಿಕರಣ’ ರಚಿಸಿತು. ಹೀಗಾಗಿ ಕಳಸಾ ಬಂಡೂರಿ ನಾಲಾ ಯೋಜನೆ ಈಗ ನ್ಯಾಯಾಧಿಕರಣದ ಅಂಗಳದಲ್ಲಿದೆ.
 ಕೆಲವು ಪ್ರಶ್ನೆಗಳು :
        ರಾಜಕಾರಣವನ್ನು ಹೊರಗಿಟ್ಟು, ವಿಶಾಲ ದೃಷ್ಠಿಯಿಂದ ಸಮಸ್ಯೆಯ ಗಂಭೀರತೆಯನ್ನು ಮನಗಂಡು, ಪರಿಹಾರ ಕಂಡುಕೊಳ್ಳಲು ಸಾಧ್ಯವಿರಲಿಲ್ಲವೆ? ಈ ಪ್ರಶ್ನೆ ಆಯಾ ಸರ್ಕಾರಗಳ ಕೆಲವು ವರ್ತನೆಗಳನ್ನು ಕೆದಕುವಂತೆ ಮಾಡುತ್ತದೆ. ಈಗಾಗಲೇ ಪ್ರಸ್ತಾಪಿಸಿದಂತೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವಿದ್ದಾಗ ಗೋವಾದ ಬಿಜೆಪಿ ಸರ್ಕಾರದ ಮೇಲೆ ಒತ್ತಡ ತಂದು, ಮನವೊಲಿಸಿ ನೀರು ವರ್ಗಯಿಸಲು ಅನುಮತಿ ಸಿಗುವಂತೆ ಮಾಡುವುದಾಗುವಂತಿರಲಿಲ್ಲವೆ? ಎರಡು ನಾಲೆಗಳ ಜೋಡಣೆಯಿಂದ ಮಹದಾಯಿ ಕಣಿವೆಯಲ್ಲಿ ನೀರಿನ ಕೊರತೆಯಂತೂ ಆಗುತ್ತಿರಲಿಲ್ಲ. ಕರ್ನಾಟಕದ ಜನತೆ ಕೇಳುತ್ತಿರುವುದು ಕೇವಲ ನೀರಿನ ಹಂಚಿಕೆಯ ಪ್ರಶ್ನೆ ಅಲ್ಲ. ತಮ್ಮ ಹಕ್ಕಿನ ಪ್ರಶ್ನೆ.

        ಎಸ್.ಎಂ. ಕೃಷ್ಣ ಸರ್ಕಾರ ನದಿ ಜೋಡಣೆಗೆ ಮುತುವಜರ್ಿ ವಹಿಸಿತ್ತು. ನಂತರ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ 19-9-2002 ರಂದು ನೀಡಿದ ತಾತ್ವಿಕ ಒಪ್ಪಿಗೆಯ ತಡೆಯಾಜ್ಞೆಯನ್ನು ತೆರವುಗೊಳಿಸಲು ಮಾಡಿದ ಪ್ರಯತ್ನಗಳೇನು? ಪ್ರಯತ್ನಗಳು ನಡೆದಿದ್ದಲ್ಲಿ ಫಲಶೃತಿ ಏನು? ಕರ್ನಾಟಕದ ಜನತೆ ತಿಳಿಯಬೇಡವೇ? ಗೋವಾದ ವಿಧಾನ ಸಭೆಗೆ ಚುನಾವಣೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಚುನಾವಣಾ ಭಾಷಣ ಮಾಡುತ್ತಾ ಕಳಸಾ ಬಂಡೂರಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಭರವಸೆ ನೀಡಿದರು. ಅದು ಕೇವಲ ಮತ ಸೆಳೆಯುವ ಗಿಮಿಕ್ಕಾಗಿತ್ತೆ ಅಥವಾ ಅವರ ಮನದಾಳದಲ್ಲಿ ಕರ್ನಾಟಕಕ್ಕೆ ಪೆಟ್ಟು ಕೊಡುವುದೇ ಆಗಿತ್ತಾ? ಜನ ಇಂಥ ಕೆಟ್ಟ ರಾಜಕೀಯದಿಂದ ಬೇಸತ್ತಿದ್ದಾರೆ. ಈ ಎರಡೂ ರಾಜಕೀಯ ವೇದಿಕೆಗಳ ಧೋರಣೆ ಕಾರ್ಯವೈಖರಿ ಒಂದೇ ಆಗಿರುವಾಗ ಜನರು ನೀರಿನ ಪ್ರಶ್ನೆಯ ಇತ್ಯರ್ಥಕ್ಕಾಗಿ ಬದಲಿ ಹೋರಾಟದ ಪಥ ತುಳಿಯುವುದೇ ಲೇಸು.