ಬೆಂಝ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರಾಗಿ
ಭಾರತೀಯ ಸಂಜಾತ ಮನುಸಾಲೆ ನೇಮಕ
ಬೆಂಝ್ ಕಂಪನಿ ಭಾರತದಲ್ಲಿ ಸ್ಥಾಪಿಸಿರುವ ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಆಡಳಿತ ನಿರ್ದೇಶಕ ಹಾಗೂ
ಕಾರ್ಯನಿರ್ವಾಹಕ ಅಧಿಕಾರಿಯಾಗಿ ಇದೇ ಮೊದಲ ಬಾರಿಗೆ ಭಾರತೀಯರೊಬ್ಬರು, ಅದರಲ್ಲೂ ಕನ್ನಡಿಗರೊಬ್ಬರು
ನೇಮಕಗೊಂಡಿದ್ದಾರೆ. ಮೂಲತಃ ಪುತ್ತೂರಿನವರೇ ಆದ ಮತ್ತು ಸಂಪೂರ್ಣ ಶಿಕ್ಷಣವನ್ನು ಕರ್ನಾಟಕದಲ್ಲೇ ಪಡೆದ
ಮನುಸಾಲೆ ಅವರು ಏಪ್ರಿಲ್ 1 ರಿಂದ ಭಾರತದಲ್ಲಿರುವ ಬೆಂಝ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ
ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇದೇ ಮೊದಲು:
ಬೆಂಝ್ ಸಂಸ್ಥೆ ಇತಿಹಾಸದಲ್ಲಿ ಭಾರತೀಯರೊಬ್ಬರು ಇಷ್ಟು ಉನ್ನತ ಹುದ್ದೆಗೆ ಏರುತ್ತಿರುವುದು ಇದೇ ಮೊದಲು.
ಕನ್ನಡಿಗರೊಬ್ಬರು ಬೆಂಝ್ ಸಂಸ್ಥೆಯಲ್ಲಿ ಇಷ್ಟು ಉನ್ನತ ಹುದ್ದೆಗೇರಿದ ಉದಾಹರಣೆಯೇ ಇಲ್ಲ. 2010ರಿಂದ
ಭಾರತದಲ್ಲಿರುವ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರಾಗಿದ್ದ ಡಾ. ಜೆನ್ಸ್ ಕಟ್ಟಾರಿಯಸ್ ಅವರು
ಇದೇ ಸಂದರ್ಭದಲ್ಲಿ ಹೊಸ ಮುಖ್ಯಸ್ಥರಾದ ಮನು ಸಾಲೆ ಅವರಿಗೆ ಬೆಂಝ್ ಕಾರ್ ಕೀ ಹಸ್ತಾಂತರಿಸುವ ಮೂಲಕ
ವಿದ್ಯುಕ್ತವಾಗಿ ಅಧಿಕಾರ ಹಸ್ತಾಂತರ ಮಾಡಿದ್ದಾರೆ.
ಕಿರು ಪರಿಚಯ:
ಮನು ಸಾಲೆ ಅವರು 1973ರ ಮೇ 4ರಂದು ದಕ್ಷಿಣ ಕನ್ನಡ ತಾಲೂಕಿನ ಪುತ್ತೂರಿನಲ್ಲಿ ಜನಿಸಿದರು.
ಹಾಸನ ಹಾಗೂ ಮೈಸೂರಿನಲ್ಲಿ ಅಧ್ಯಯನ ನಡೆಸಿದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. 1995ರಲ್ಲಿ ಕ್ಯಾಂಪಸ್
ಆಯ್ಕೆ ಪ್ರಕ್ರಿಯೆಯಲ್ಲಿ ಬಾಷ್ ಸಂಸ್ಥೆಗೆ ಆಯ್ಕೆಯಾದರು. ನಂತರ ಬ್ರಾಜಿಲ್, ಜರ್ಮನಿ, ಚೈನಾ,
ದಕ್ಷಿಣ ಕೊರಿಯಾಗಳಲ್ಲಿ ಬಾಷ್ ಸಂಸ್ಥೆಯಲ್ಲೇ ಕೆಲಸ ಮಾಡಿದ ಅವರು, 2011ರ ಜೂನ್‌ನಲ್ಲಿ ಭಾರತದಲ್ಲಿರುವ
ಬೆಂಝ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಎಲಿಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ
ಮುಖ್ಯಸ್ಥರಾಗಿ ಸೇರಿದರು. 2012ರಲ್ಲಿ ಉಪ ಆಡಳಿತ ನಿರ್ದೇಶಕರಾಗಿ ನೇಮಕಗೊಂಡಿದ್ದರು. 1996ರಲ್ಲಿ ಬೆಂಝ್
ಸಂಸ್ಥೆ ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಿದ್ದು, ಈಗ ಅದರಲ್ಲಿ 1400 ಮಂದಿ ಉದ್ಯೋಗ
ಪಡೆದಿದ್ದಾರೆ. ಬೆಂಝ್ ಸಂಸ್ಥೆ ಜರ್ಮನಿಯ ಹೊರಗೆ ಹೊಂದಿರುವ ಅತ್ಯಂತ ದೊಡ್ಡ ಮತ್ತು ಆಧುನಿಕ ಸಂಶೋಧನಾ
ಕೇಂದ್ರ ಇದಾಗಿದೆ.
No comments:
Post a Comment
Thanking You For Your Valuable Comment. Keep Smile