ಮೊಬೈಲ್ ಮೆಸೇಜಿಂಗ್ ಸರ್ವೀಸ್ ವಾಟ್ಸ್‌ಆಪ್ ಅನ್ನು ಖರೀದಿಸಿದ
ಫೇಸ್‌ಬುಕ್
ಮೊಬೈಲ್ ತಂತ್ರಜ್ಞಾನದ ಇತಿಹಾಸದಲ್ಲೇ ಅತಿದೊಡ್ಡ ಡೀಲ್ ನಡೆದಿದೆ. ಜನಪ್ರಿಯ ಮೊಬೈಲ್ ಮೆಸೇಜಿಂಗ್ ಸರ್ವೀಸ್
ಆಗಿರುವ ವಾಟ್ಸ್‌ಆಪ್ ಅನ್ನು ಬರೋಬ್ಬರಿ 12 ಲಕ್ಷ ಸಾವಿರ ಕೋಟಿಗೆ ಫೇಸ್‌ಬುಕ್ ಖರೀದಿಸಿದೆ.
ಯಾಕೆ ಡೀಲ್?
ಸಾಮಾಜಿಕ ತಾಣಗಳಲ್ಲಿ ಜನಪ್ರಿಯತೆ ಗಳಿಸಿರುವ ಫೇಸ್‌ಬುಕ್‌ಗೆ ಮೊಬೈಲ್ ಸಂವಹನದಲ್ಲೂ ಪಾರುಪತ್ಯ
ಗಳಿಸಬೇಕೆಂಬ ಧ್ಯೇಯವಿತ್ತು. ಅದರ ಪರಿಣಾಮವೇ ಫೇಸ್‌ಬುಕ್-ವಾಟ್ಸ್‌ಆಪ್ ಡೀಲ್. ಈ ಬೃಹತ್ ಒಪ್ಪಂದದ
ಮೂಲಕ ಫೇಸ್‌ಬುಕ್ ಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ಮೊಬೈಲ್ ಸಂವಹನ ಲೋಕಕ್ಕೆ ಕಾಲಿಟ್ಟಿದ್ದಾರೆ.
ವಿಶೇಷವಾಗಿ ಯುವಜನರ ಮನಸ್ಸಿನಲ್ಲಿ ಸ್ಥಾನ ಪಡೆಯುವುದು ಹಾಗೂ ತನ್ನ ಜನಪ್ರಿಯತೆಯನ್ನು ಇನ್ನಷ್ಟು
ಹೆಚ್ಚಿಸುವುದು ಇದರ ಹಿಂದಿನ ಮುಖ್ಯ ಉದ್ದೇಶವಾಗಿದೆ.
ಒಪ್ಪಂದದಲ್ಲೇನಿದೆ?
ಒಟ್ಟು 19 ಶತಕೋಟಿ ಡಾಲರ್‌ಗೆ ವಾಟ್ಸ್‌ಆಪ್ ಅನ್ನು ಫೇಸ್‌ಬುಕ್ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ.
ಒಪ್ಪಂದದ ಪ್ರಕಾರ, ಫೇಸ್‌ಬುಕ್ ಮೊದಲು 4 ಶತಕೋಟಿ ಡಾಲರ್ ಅನ್ನು ನಗದು ರೂಪದಲ್ಲಿ ನೀಡಲಿದೆ.
ನಂತರ ಫೇಸ್‌ಬುಕ್‌ನ ಷೇರುಗಳ ರೂಪದಲ್ಲಿ 12 ಶತಕೋಟಿ ಡಾಲರ್ ನೀಡಲಿದೆ. ಅಷ್ಟೇ ಅಲ್ಲದೆ, ವಾಟ್ಸ್‌ಆಪ್
ಸ್ಥಾಪಕರು ಮತ್ತು ನೌಕರರಿಗೆ 3 ಶತಕೋಟಿ ಡಾಲರ್ ಮೊತ್ತದ ನಿಯಂತ್ರಿತ ಷೇರುಗಳನ್ನು ಫೇಸ್‌ಬುಕ್ ಒದಗಿಸಲಿದೆ.
ಒಪ್ಪಂದದಂತೆ, ವಾಟ್ಸ್‌ಆಪ್ ಸ್ಥಾಪಕ ಜಾನ್ ಕೌಮ್ ಫೇಸ್‌ಬುಕ್‌ನ ನಿರ್ದೇಶಕರ ಮಂಡಳಿಯಲ್ಲಿ ಸ್ಥಾನ ಪಡೆಯಲಿದ್ದಾರೆ.
ದೊಡ್ಡ ಡೀಲ್?
ವಾಟ್ಸ್‌ಆಪ್-ಫೇಸ್‌ಬುಕ್ ಡೀಲ್ 19 ಶತಕೋಟಿ ಡಾಲರ್(12 ಲಕ್ಷ ಸಾವಿರ ಕೋಟಿ). 2011ರಲ್ಲಿ 8.5 ಬಿಲಿಯನ್
ಡಾಲರ್(528 ಶತಕೋಟಿ ಡಾಲರ್)ಗೆ ಸ್ಕೈಪ್ ಅನ್ನು ಮೈಕ್ರೋಸಾಫ್ಟ್ ಖರೀದಿಸಿತ್ತು. ಮೋಟೊರೋಲಾ ಖರೀದಿ ವೇಳೆ
ಲೆನೋವೋ 2.9 ಶತಕೋಟಿ ಡಾಲರ್ ಅನ್ನು ಗೂಗಲ್‌ಗೆ ನೀಡಿತ್ತು. ಇತ್ತೀಚೆಗಷ್ಟೇ ಫೇಸ್‌ಬುಕ್ 1 ಶತಕೋಟಿ ಡಾಲರ್‌ಗೆ
ಇನ್‌ಸ್ಟಾಗ್ರಾಂ ಅನ್ನು ಸ್ವಾಧೀನಪಡಿಸಿಕೊಂಡಿತ್ತು. ಹಾಗಾಗಿ ಮೊಬೈಲ್ ಟೆಕ್ ವಲಯದ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ
ಮೊತ್ತಕ್ಕೆ ನಡೆದ ಒಪ್ಪಂದವೆಂದರೆ ವಾಟ್ಸ್‌ಆಪ್-ಫೇಸ್‌ಬುಕ್ ಡೀಲ್.
ವಾಟ್ಸ್‌ಆಪ್ ಇತಿಹಾಸ:
ವಾಟ್ಸ್‌ಆಪ್‌ನ ಸ್ಥಾಪಕ ಹಾಗೂ ಸಿಇಓ ಜಾನ್ ಕೌಮ್(37) ಮೂಲತಃ ಉಕ್ರೇನ್‌ನವರು. ಕಡು ಬಡ ಕುಟುಂಬವರಾಗಿದ್ದ
ಕೌಮ್ ಕುಟುಂಬ ಕ್ಯಾಲಿಫೋರ್ನಿಯಾಗೆ ವಲಸೆ ಬಂದಿತ್ತು. ಆಗ ಕೌಮ್‌ಗೆ 16 ವರ್ಷ. ಸರ್ಕಾರವು ಅತಿ ಬಡವರಿಗೆ ನೀಡುವ
ಆಹಾರದ ಕೂಪನ್ ಮೂಲಕ ಆಹಾರ ಪಡೆದು ಕೌಮ್ ಕುಟುಂಬ ದಿನದೂಡುತ್ತಿತ್ತು. ಒಂದು ಕಾಲದಲ್ಲಿ ಅಂತಹ ದುರವಸ್ಥೆಯ
ಬದುಕಿಗೆ ಸಾಕ್ಷಿಯಾಗಿದ್ದ ಕೌಮ್ ಈಗ ಕೋಟ್ಯಧಿಪತಿಯಾಗಿ ಬೆಳೆದಿದ್ದಾರೆ. ಬಿಲ್ ಗೇಟ್ಸ್, ಮಾರ್ಕ್ಝುಕರ್‌ಬರ್ಗ್‌ರಂತೆಯೇ
ಕೌಮ್ ಕೂಡ ಅರ್ಧದಲ್ಲೇ ಕಾಲೇಜು ಬಿಟ್ಟವರು. ಬಾಗಿಲು ತಟ್ಟಿ ವಾಪಸಾಗಿದ್ದ ವಾಟ್ಸ್‌ಆಯಪ್‌ನ ಸಹಸ್ಥಾಪಕ ಬ್ರಿಯಾನ್
ಆಯಕ್ಟನ್ 2009ರಲ್ಲಿ ಕೆಲಸಕ್ಕಾಗಿ ಸ್ವತಃ ಫೇಸ್‌ಬುಕ್ ಹಾಗೂ ಟ್ವಿಟರ್ ಕಚೇರಿಯ ಬಾಗಿಲು ತಟ್ಟಿದ್ದ. ಆದರೆ ಕೆಲಸ
ಗಿಟ್ಟಿಸಿಕೊಳ್ಳುವಲ್ಲಿ ವಿಫಲನಾದ. ನಂತರ ವಾಟ್ಸ್‌ಆಯಪ್‌ನ ಸಹಸ್ಥಾಪಕನ ಹುದ್ದೆ ಬ್ರಿಯಾನ್‌ನ ಬದುಕಿಗ ಗತಿಯನ್ನೇ
ಬದಲಾಯಿಸಿತು. ಅಂದು ಕೆಲಸೇ ನೀಡದೇ ವಾಪಸ್ ಕಳುಹಿಸಿದ್ದ ಅದೇ ಫೇಸ್‌ಬುಕ್ ಈಗ ಕೌಮ್- ಬ್ರಿಯಾನ್‌ರ
ಕಂಪನಿಯನ್ನು ಖರೀದಿಸಿದೆ ಎನ್ನುವುದು ವಿಪರ್ಯಾಸ.
ಪರಿಣಾಮವೇನು?
ಈ ಡೀಲ್‌ನಿಂದಾಗಿ ವಾಟ್ಸ್‌ಆಯಪ್ ಬ್ರ್ಯಾಂಡ್ ಮೇಲೆ ಯಾವುದೇ ಪರಿಣಾಮ ಬೀರದು. ಈ ಬ್ರ್ಯಾಂಡ್ ಅನ್ನು ಇದೇ
ರೀತಿ ಮುಂದುವರಿಸಿಕೊಂಡು ಹೋಗುವುದಾಗಿ ಝುಕರ್‌ಬರ್ಗ್ ಭರವಸೆ ನೀಡಿದ್ದಾರೆ. ಜತೆಗೆ ವಾಟ್ಸ್‌ಆಯಪ್‌ನ ಪ್ರಧಾನ
ಕಚೇರಿಯೂ ಕ್ಯಾಲಿಫೋರ್ನಿಯಾದ ಮೌಂಟನ್ ವ್ಯೂವ್‌ನಲ್ಲೇ ಇರಲಿದೆ. ಅದು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ.
ಈಗ ಹೇಗೆ ಸೇವೆ ನೀಡುತ್ತದೆಯೋ ಅದೇ ರೀತಿ ಸೇವೆ ನೀಡಲಿದೆ. ಬಳಕೆದಾರರಿಗೆ ಈಗಿನಂತೆಯೇ ಜಾಹೀರಾತುಗಳ
ಕಿರಿಕಿರಿಯೂ ಇರುವುದಿಲ್ಲ.